ಕೊಪ್ಪಳ: ಕೊಪ್ಪಳ ಜಿಲ್ಲೆಗೆ ಪುನೀತ್ ಕೆರೆಹಳ್ಳಿಗೆ ನಿರ್ಬಂಧವಿದ್ದರೂ ಕೇಳದೇ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಅಂಜನಾದ್ರಿ ಬೆಟ್ಟ ಏರಿರುವ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಕಾರ್ಯಕರ್ತ ಪುನೀತ್ ಕೆರಹಳ್ಳಿಗೆ ಮಾರ್ಚ್ 21ರಿಂದ 23ರವರೆಗೆ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಈ ನಡುವೆ ಅಂಜನಾದ್ರಿ ಬೆಟ್ಟದಲ್ಲಿ ಹನುಮ ದೇವರ ದರ್ಶನಕ್ಕೆ ಒತ್ತಾಯಿಸಿದ ಕೆರಹಳ್ಳಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿ, ನಂತರ ಅಧಿಕಾರಿಗಳೊಂದಿಗೇ ಅಂಜನಾದ್ರಿ ಬೆಟ್ಟ ಏರಿದ್ದಾರೆ.
ಕನಕಗಿರಿಯಲ್ಲಿ ಈ ಹಿಂದೆ ಪ್ರಮೋದ್ ಮುತಾಲಿಕ್ ಹಾಗೂ ಪುನೀತ್ ಕೆರಹಳ್ಳಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ಮತೀಯ ಭಾವನೆಗಳಿಗೆ ಪ್ರಚೋದನೆ ಉಂಟು ಮಾಡುವ ವಿವಾದಾತ್ಮಕ ಭಾಷಣ ಮಾಡಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಕೇಸ್ ದಾಖಾಗಿತ್ತು. ಈ ಹಿನ್ನೆಲೆಯಲ್ಲಿ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ನಡೆಯಲಿದ್ದ ಶಿವಾಜಿ ಜಯಂತೋತ್ಸವದಲ್ಲಿ ಭಾಗವಹಿಸಲು ಪ್ರಮೋದ್ ಮುತಾಲಿಕ್ ಹಾಗೂ ಪುನೀತ್ ಕೆರಹಳ್ಳಿ ಆಗಮಿಸುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಇಬ್ಬರಿಗೂ ಜಿಲ್ಲೆಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು.
ನಿರ್ಬಂಧದ ನಡುವೆಯೂ ಪುನೀತ್ ಕೆರಹಳ್ಳಿ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದು, ಅವರಿಗೆ ನೋಟಿಸ್ ನೀಡಲು ಮುಂದಾದ ಯಲಬುರ್ಗಾ ಪೊಲೀಸರೊಂದಿಗೆ ಅವರು ಕಿರಿಕ್ ಮಾಡಿದ್ದಾರೆ. ನೋಟಿಸ್ ನಕಲಿ, ಇದು ಕಲರ್ ಝರಾಕ್ಸ್ ಎಂದು ವಾದಿಸಿದ ಪುನೀತ್, ತಾವು ದರ್ಶನ ಮಾಡುವುದಾಗಿ ಒತ್ತಾಯಿಸಿದ್ದಾರೆ. ಪೊಲೀಸರು ನಿಯಮ ಪಾಲನೆಗೆ ಒತ್ತಾಯಿಸಿ ಸ್ಥಳ ತೊರೆಯುವಂತೆ ಸೂಚಿಸಿದ ನಂತರ ಕೆಲಕಾಲದ ಮಾತಿನ ಚಕಮಕಿ ನಡೆದಿದೆ. ಬಳಿಕ ಪೊಲೀಸರೊಂದಿಗೆ ಪುನೀತ್ ಅಂಜನಾದ್ರಿ ಬೆಟ್ಟ ಏರಿದ್ದಾರೆ ಎನ್ನಲಾಗಿದೆ.

