ಬೆಂಗಳೂರು/ನೆಲಮಂಗಲ: ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಮಸಿ ಬಳಿಯುವಂತಹ ಘಟನೆಯೊಂದು ನೆಲಮಂಗಲ ತಾಲೂಕಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ತರಗತಿಯಲ್ಲೇ ವಿದ್ಯಾರ್ಥಿನಿಗೆ ಪ್ರೇಮ ನಿವೇದನೆ ಮಾಡಿದ ಪ್ರೊಫೆಸರ್ ಒಬ್ಬರಿಗೆ ವಿದ್ಯಾರ್ಥಿನಿ ಚಪ್ಪಲಿಯಿಂದ ಹೊಡೆದರೆ, ಇತರ ವಿದ್ಯಾರ್ಥಿಗಳು ಅಟ್ಟಾಡಿಸಿ ಥಳಿಸಿದ್ದಾರೆ.
ಏನಿದು ಘಟನೆ : ಕಾಲೇಜಿನ ಪ್ರೊಫೆಸರ್ ಅಬ್ದುಲ್ ಎಂಬಾತ ತರಗತಿ ನಡೆಯುತ್ತಿದ್ದ ವೇಳೆ ಎಲ್ಲರ ಮುಂದೆಯೇ ವಿದ್ಯಾರ್ಥಿನಿಯೊಬ್ಬಳಿಗೆ ಚಾಕೊಲೇಟ್ ನೀಡಿ ‘ಪ್ರಪೋಸ್’ ಮಾಡಿದ್ದಾನೆ. ಈ ಅನಿರೀಕ್ಷಿತ ವರ್ತನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ, ತರಗತಿಯಲ್ಲೇ ಅಬ್ದುಲ್‌ನನ್ನು ಪ್ರಶ್ನಿಸಿ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಪ್ರೊಫೆಸರ್‌ನ ಅಸಭ್ಯ ವರ್ತನೆಯಿಂದ ರೊಚ್ಚಿಗೆದ್ದ ಇತರ ವಿದ್ಯಾರ್ಥಿಗಳು ಆತನನ್ನು ಕ್ಯಾಂಪಸ್‌ನಲ್ಲೇ ಅಟ್ಟಾಡಿಸಿದ್ದಾರೆ. ಆತ ತನ್ನ ಕಾರಿನ ಬಳಿ ಹೋದಾಗಲೂ ಬಿಡದ ವಿದ್ಯಾರ್ಥಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೊನೆಗೆ ವಿದ್ಯಾರ್ಥಿಗಳ ಕೈಯಿಂದ ಹೇಗೋ ತಪ್ಪಿಸಿಕೊಂಡ ಅಬ್ದುಲ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಪೊಲೀಸ್ ದೂರು : ಈ ಘಟನೆಯು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

