ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದನ್ನು ತೀವ್ರವಾಗಿ ಖಂಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಅನುಮಾನ: “ಬಿಜೆಪಿ-ಜೆಡಿಎಸ್ ದೂರು ನೀಡಿದ ತಕ್ಷಣ ಆಯೋಗ ಸ್ಪಂದಿಸುತ್ತದೆ, ಆದರೆ ನಾವು ನೀಡುವ ಸಲಹೆಗಳಿಗೆ ಏಕೆ ಮೌನ ವಹಿಸುತ್ತದೆ?” ಇದು ಆಯೋಗದ ಕಾರ್ಯವೈಖರಿಯ ಮೇಲೆ ಸಂಶಯ ಮೂಡಿಸುತ್ತದೆ ಎಂದರು.
ಎಸ್‌ಐಆರ್ ಪ್ರಕ್ರಿಯೆಯು ಒಂದು ನಿಗದಿತ ಕಾರ್ಯಾಚರಣಾ ವಿಧಾನವಾಗಿದೆ (SOP). ಪಶ್ಚಿಮ ಬಂಗಾಳದಲ್ಲಿ ಇದೇ ಪ್ರಕ್ರಿಯೆ ನಡೆದಾಗ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇದೀಗ ರಾಜ್ಯದಲ್ಲೂ ಅದೇ ರೀತಿ ನಾಟಕವಾಡುತ್ತಿದ್ದಾರೆ. ನಾವು ಸಂವಿಧಾನಾತ್ಮಕವಾಗಿ, ವೈಜ್ಞಾನಿಕವಾಗಿ ಮತದಾರರ ಹಕ್ಕು ರಕ್ಷಣೆಗಾಗಿ 12 ಪ್ರಮುಖ ವಿಚಾರಗಳನ್ನು ಆಯೋಗದ ಗಮನಕ್ಕೆ ತಂದಿದ್ದೇವೆ. ಆದರೆ ಅದಕ್ಕೆ ಯಾವುದೇ ಉತ್ತರವಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬರ ಪರಿಹಾರ ಮತ್ತು ಸಿಎಂ ಸೂಚನೆ
ರಾಜ್ಯದಲ್ಲಿನ ಬರ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ವರದಿ ಸಿದ್ಧಪಡಿಸಿ ಕಳುಹಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ, ಆದರೆ ಪರಿಹಾರ ಘೋಷಿಸುವುದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದರು. ಬಿತ್ತನೆ, ಹವಾಮಾನ ವೈಪರೀತ್ಯ, ಮಣ್ಣಿನ ತೇವಾಂಶ ಮತ್ತು ಮೇವಿನ ಲಭ್ಯತೆ ಎಲ್ಲವನ್ನೂ ಪರಿಗಣಿಸಿ, ಕೇಂದ್ರದ ಮಾನದಂಡಗಳ ಅನ್ವಯವೇ ವರದಿ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಚನ್ನಪಟ್ಟಣ ತಹಸೀಲ್ದಾರ್ ಮೇಲಿನ ಹಲ್ಲೆ: ಈ ವಿಷಯವು ಈಗಷ್ಟೇ ಗಮನಕ್ಕೆ ಬಂದಿದೆ. ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಹೆಚ್ಚಿನ ಮಾಹಿತಿ ಪಡೆದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ: ಬೆಳಗಾವಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ನಡೆಯುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿಯ ಅಗತ್ಯವಿಲ್ಲ. ಆದರೆ, ಸಾರ್ವಜನಿಕವಾಗಿ ಬೀದಿಗಿಳಿದು ಮೆರವಣಿಗೆ ಮಾಡುವುದಾದರೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಕಾನೂನು ಸುವ್ಯವಸ್ಥೆ ಹದಗೆಡುವ ಆತಂಕವಿದ್ದರೆ ಅಂತಹ ಕಾರ್ಯಕ್ರಮಗಳನ್ನು ಮುಂದೂಡುವಂತೆ ಸೂಚಿಸಲಾಗುವುದು” ಎಂದು ಸ್ಪಷ್ಟಪಡಿಸಿದರು

