ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಹೆತ್ತ ತಾಯಿಯಂತಿರುವ ಕನ್ನಡ ಭಾಷೆಗೆ ಮತ್ತೊಂದು ಘೋರ ಅಪಮಾನ ನಡೆದಿದೆ. ನಗರದ ಹೊರವಲಯದ ಕೆಂಗೇರಿಯ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಕ್ರೂರ ಶಿಕ್ಷೆ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. “I Will Never Speak Kannada In This Campus” ಎಂದು ನೋಟ್‌ಬುಕ್‌ನಲ್ಲಿ ಎಂದು 200 ಬಾರಿ ಬರೆಯುವಂತೆ ಮಗುವಿನ ಮೇಲೆ ಒತ್ತಡ ಹೇರಲಾಗಿದ್ದು, ಈ ವಿಷಯ ಬಹಿರಂಗವಾಗುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶದ ಬಿರುಗಾಳಿ ಎದ್ದಿದೆ.
ಇಂಗ್ಲಿಷ್ ಗುಲಾಮಗಿರಿ: I Will Never Speak Kannada In This Campus’ ಎಂದು ಬರೆಸಿದರು
ಮಗುವಿನ ನೋಟ್‌ಬುಕ್‌ನಲ್ಲಿ ಶಿಕ್ಷಕರು ಬರೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಡೀ ಕನ್ನಡಿಗರು ಆಘಾತ ವ್ಯಕ್ತಪಡಿಸುತ್ತಿದ್ದಾರೆ. ಶಾಲಾ ಸಮಯದಲ್ಲಿ ಮಗು ಕನ್ನಡ ಬಳಸಿದ್ದನ್ನೇ ಮಹಾಪರಾಧ ಎಂಬಂತೆ ಬಿಂಬಿಸಿರುವ ಶಿಕ್ಷಕರು, ಆತನಿಗೆ ಮಾನಸಿಕ ಹಿಂಸೆ ನೀಡಿ ಇಂಗ್ಲಿಷ್‌ನಲ್ಲೇ ಮಾತನಾಡುವಂತೆ ಬಲವಂತ ಮಾಡಿದ್ದಾರೆ. ಕರ್ನಾಟಕದ ಮಣ್ಣಿನಲ್ಲೇ ಹುಟ್ಟಿ, ಕನ್ನಡ ನೆಲದ ಶಾಲೆಯಲ್ಲೇ ಓದುತ್ತಿರುವ ಕಂದಮ್ಮಗಳಲ್ಲಿ ಮಾತೃಭಾಷೆಯ ಬಗ್ಗೆ ಇಂತಹ ಕೀಳರಿಮೆ ಮೂಡಿಸುತ್ತಿರುವ ಖಾಸಗಿ ಶಾಲೆಗಳ ಈ ಧೋರಣೆ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ.
ಇಂಗ್ಲಿಷ್ ಕೇವಲ ಉದ್ಯೋಗಕ್ಕೆ ಬೇಕಾಗುವ ಒಂದು ಭಾಷೆಯಾಗಬಹುದೇ ಹೊರತು, ನಮ್ಮ ಸಂಸ್ಕೃತಿ, ಭಾವನೆ ಮತ್ತು ಅಸ್ಮಿತೆಯನ್ನು ಕಟ್ಟಿ ಕೊಡುವುದು ಮಾತೃಭಾಷೆ ಕನ್ನಡ ಮಾತ್ರ ಎಂಬುದನ್ನು ಈ ಶಿಕ್ಷಣ ಸಂಸ್ಥೆಗಳು ಮರೆತಿರುವುದು ದುರಂತ.
ಕನ್ನಡಿಗರ ನೇರ ಆಕ್ರೋಶ:
“ಬೆಂಗಳೂರು ಇಂದು ಕೇವಲ ಕನ್ನಡಿಗರಿಗಷ್ಟೇ ಸೀಮಿತವಾಗಿಲ್ಲ, ದೇಶದ ಮೂಲೆ ಮೂಲೆಗಳಿಂದ ಬಂದು ಇಲ್ಲಿ ಕೋಟಿ ಕೋಟಿ ಹಣ ಸಂಪಾದಿಸುತ್ತಿದ್ದಾರೆ. ಇಷ್ಟಾದರೂ ಇಲ್ಲಿನ ಕೆಲವು ಆಫೀಸ್‌ಗಳು, ಶಾಲೆ-ಕಾಲೇಜುಗಳಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ. ನಮ್ಮದೇ ನೆಲದಲ್ಲಿ ಕನ್ನಡ ಮಾತನಾಡಲು ನಮ್ಮ ಮಕ್ಕಳು ಭಯಪಡಬೇಕಾದ ಪರಿಸ್ಥಿತಿ ಬಂದಿದೆಯೇ?” ಎಂದು ಕನ್ನಡ ಹೋರಾಟಗಾರರು ಶಾಲೆಯ ವಿರುದ್ಧ ಕಿಡಿಕಾರಿದ್ದಾರೆ.
ಶಾಲೆಗೆ ಮುತ್ತಿಗೆ; ತರಾಟೆಗೆ ತೆಗೆದುಕೊಂಡ ಹೋರಾಟಗಾರರು
ಘಟನೆ ತಿಳಿಯುತ್ತಿದ್ದಂತೆ ಎಚ್ಚೆತ್ತ ಕನ್ನಡಪರ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳ ಸದಸ್ಯರು ತಕ್ಷಣವೇ ಕೆಂಗೇರಿಯ ಆ ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಶಾಲೆಯ ಪ್ರಾಂಶುಪಾಲರಾದ ಲೋಕೇಶ್ ಅವರು ಮಾಧ್ಯಮಗಳ ಮುಂದೆ ಬಂದು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ.
“ನಮ್ಮ ಕಡೆಯಿಂದ ದೊಡ್ಡ ತಪ್ಪಾಗಿದೆ. ವಿದ್ಯಾರ್ಥಿಯ ಇಂಗ್ಲಿಷ್ ಭಾಷಾ ಕೌಶಲ್ಯ ಬೆಳೆಸುವ ಉದ್ದೇಶದಿಂದ ಶಿಕ್ಷಕರು ಈ ಕ್ರಮ ಕೈಗೊಂಡಿದ್ದರೂ, ಅವರು ಅನುಸರಿಸಿದ ವಿಧಾನ ಸಂಪೂರ್ಣ ತಪ್ಪು. ಸಂಬಂಧಪಟ್ಟ ಶಿಕ್ಷಕರನ್ನು ಕರೆಸಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು, ಕೌನ್ಸೆಲಿಂಗ್ ನಡೆಸಲಾಗಿದೆ. ಮುಂದೆ ಯಾವುದೇ ಮಗುವಿಗೆ ಭಾಷೆಯ ಆಧಾರದ ಮೇಲೆ ಶಿಕ್ಷೆ ನೀಡುವುದಿಲ್ಲ” ಎಂದು ಶಾಲಾ ಆಡಳಿತ ಮಂಡಳಿ ಲಿಖಿತ ಭರವಸೆ ನೀಡಿದೆ.
ಬದಲಾಗದ ಅನ್ಯರಾಜ್ಯದವರ ಮನೋಭಾವ:
ಇದು ಕೇವಲ ಒಂದು ಶಾಲೆಯ ಕಥೆಯಲ್ಲ, ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳು ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಅನ್ಯರಾಜ್ಯದವರೇ ತುಂಬಿಹೋಗಿದ್ದು, ಕನ್ನಡಿಗರು ಅವರ ಭಾಷೆಯಲ್ಲೇ ವ್ಯವಹಾರ ಮಾಡುವಂತಾಗಿದೆ. ಸರ್ಕಾರ ಕನ್ನಡ ಕಲಿಕೆಗೆ ಕಠಿಣ ನಿಯಮ ತರುತ್ತಿದ್ದರೂ, ಹೊರಗಿನಿಂದ ಬಂದ ಹಲವರಿಗೆ ಕನ್ನಡದ ಬಗ್ಗೆ ಇರುವ ತಿರಸ್ಕಾರದ ಮನೋಭಾವ ಇಂತಹ ಘಟನೆಗಳಿಗೆ ಮುಖ್ಯ ಕಾರಣವಾಗಿದೆ. ಸದ್ಯಕ್ಕೆ ಈ ಪ್ರಕರಣ ಖಾಸಗಿ ಶಾಲೆಗಳ ಭಾಷಾ ನೀತಿಯ ವಿರುದ್ಧ ಕನ್ನಡಿಗರು ಮತ್ತೊಮ್ಮೆ ಹೋರಾಟಕ್ಕೆ ನಿಲ್ಲುವಂತೆ ಮಾಡಿದೆ.

