HomeLatest Newsಮಾಲಿವುಡ್‌ಗೆ ಯಾರು ಬೇಕಾದರೂ ಬನ್ನಿ, ಆದರೆ ಏನನ್ನೂ ಬದಲಿಸುವ ಪ್ರಯತ್ನ ಮಾಡಬೇಡಿ, ಇಲ್ಲಿಂದ ಕಲಿತುಕೊಂಡು ಹೋಗಿ...

ಮಾಲಿವುಡ್‌ಗೆ ಯಾರು ಬೇಕಾದರೂ ಬನ್ನಿ, ಆದರೆ ಏನನ್ನೂ ಬದಲಿಸುವ ಪ್ರಯತ್ನ ಮಾಡಬೇಡಿ, ಇಲ್ಲಿಂದ ಕಲಿತುಕೊಂಡು ಹೋಗಿ ಅಷ್ಟೇ: ಪೃಥ್ವಿರಾಜ್ ಸುಕುಮಾರನ್ ಖಡಕ್ ಹೇಳಿಕೆ; ವಿಡಿಯೊ

ಕಳೆದ ಎರಡು ದಶಕಗಳಿಂದ ಭಾರತದಲ್ಲಿ ಅತಿ ಹೆಚ್ಚು ಯಶಸ್ಸು ಹಾಗೂ ಜನಪ್ರಿಯತೆ ಗಳಿಸಿರುವ ಚಿತ್ರರಂಗವೆಂದರೆ ಅದು ಮಲಯಾಳಂ ಚಿತ್ರರಂಗ. ಇತರೆ ಚಿತ್ರರಂಗಳ ಹಾಗೆ ಒಂದು ವರ್ಷ ಅಬ್ಬರಿಸಿ ಮುಂದಿನ ವರ್ಷ ಸೈಲೆಂಟ್ ಆಗದ ಮಾಲಿವುಡ್ ಪ್ರತಿ ವರ್ಷವೂ ಪ್ರೇಕ್ಷಕನನ್ನು ಕಾಡುವ ಚಿತ್ರಗಳನ್ನು ಕೊಡುತ್ತಾ ಬಂದಿದೆ.

ಇನ್ನು ಮಲಯಾಳಂ ಚಿತ್ರದ ಈ ಯಶಸ್ಸಿಗೆ ಅದರದ್ದೇ ಆದ ಸೂತ್ರಗಳಿದ್ದು, ಚಿತ್ರ ವೀಕ್ಷಕನಿಗೆ ಮೇಲ್ನೋಟಕ್ಕೆ ಕಾಣ ಸಿಗುವ ಸೂತ್ರಗಳ ಪೈಕಿ ಅವರು ಸ್ಟಾರ್‌ಗಳ ಹಿಂದೆ ಬೀಳದೇ ಚಿತ್ರದ ಕತೆಗೆ ಸೂಕ್ತವೆನಿಸುವ ಕಲಾವಿದನನ್ನು ಕಾಸ್ಟಿಂಗ್ ಮಾಡುವುದು ಪ್ರಮುಖವಾದದ್ದು. ಅದರ ಜತೆಗೆ ಇತರೆ ಚಿತ್ರಗಳ ಹಾಗೆ ನಾಯಕ ಬಲಿಷ್ಠ, ಎಷ್ಟೇ ಮಂದಿ ಬಂದರೂ ಹೊಡೆದುಹಾಕಿಬಿಡುತ್ತಾನೆ ಎನ್ನುವ ಹಾಗೆ ಕಥೆ ಹೆಣೆಯದೇ ನಾಯಕನನ್ನು ಸಾಮಾನ್ಯ ಜನರ ಹಾಗೆ ತೆರೆ ಮೇಲೆ ತೋರಿಸಿ ಆತನೂ ನಮ್ಮ ಹಾಗೆ ಕಷ್ಟಪಡುವ ಹೆಚ್ಚು ಬಲ ಇಲ್ಲದ ವ್ಯಕ್ತಿ ಎಂದು ಕಥೆ ಹೇಳುವುದೂ ಸಹ ಇನ್ನೊಂದು ಸೂತ್ರ.

ಈ ಎರಡು ಮಾತ್ರವಲ್ಲದೇ ಇನ್ನೂ ಅನೇಕ ಸಿದ್ಧ ಸೂತ್ರಗಳನ್ನು ಮಲಯಾಳಂ ಸಿನಿಮಾ ಮಂದಿ ಅನುಸರಿಸುತ್ತಿದ್ದು, ಅವುಗಳೇ ಹಲವಾರು ಸಿನಿಮಾಗಳ ಯಶಸ್ಸಿಗೆ ಕಾರಣ ಎಂದರೆ ತಪ್ಪಾಗಲಾರದು. ಏಕೆಂದರೆ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಅಬ್ಬರಕ್ಕಿಂತ ನೈಜತೆಯನ್ನು ಹೊಂದಿದ್ದರೆ ಜನರಿಗೆ ಹತ್ತಿರವಾಗಿ ಗೆಲ್ಲುತ್ತವೆ ಎನ್ನುವುದನ್ನು ತಳ್ಳಿಹಾಕುವ ಹಾಗಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಕಟ್ಟಿಕೊಂಡಿರುವ ಮಲಯಾಳಂ ಚಿತ್ರಗಳಿಗೆ ಬೇರೆ ಚಿತ್ರರಂಗಗಳ ಹಾಗೆ ಎಲ್ಲಿಂದಲೋ ಬಂದು ಗೆಲ್ಲುವುದು ಕಷ್ಟ. ಅಲ್ಲದೇ ಬೇರೆ ಚಿತ್ರರಂಗಗಳ ಸೂತ್ರ ಇಲ್ಲಿ ಗೋತಾ ಹೊಡೆಯುವುದೇ ಹೆಚ್ಚು. ಮಲಯಾಳಂ ಸಿನಿ ಪ್ರೇಕ್ಷಕರು ಅಷ್ಟೇ, ಅತಿಯಾದ ಹೀರೋಯಿಸಂ, ನಾಯಕನ ಬಾಯಲ್ಲಿ ಮಾರುದ್ದ ಡೈಲಾಗ್ ಕೇಳಿಬಂದರೆ ಅಂತಹವುಗಳನ್ನು ರಂಜಿಸುವುದಿಲ್ಲ.

ಸದ್ಯ ಈ ಕುರಿತು ಮಲಯಾಳಂನ ಖ್ಯಾತ ನಟ ಹಾಗೂ ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ದಿ ಹಾಲಿವುಡ್ ರಿಪೋರ್ಟರ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಚಿತ್ರರಂಗಕ್ಕೆ ಬರುವವರಿಗೆ ಖಡಕ್ ಸಲಹೆಯೊಂದನ್ನು ನೀಡಿದ್ದಾರೆ.

ಇದೇ ಜುಲೈ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಐ ನೋಬಡಿ ಚಿತ್ರದ ಕುರಿತು ಮಾತನಾಡಿದ ಪೃಥ್ವಿರಾಜ್ ಸುಕುಮಾರನ್‌ಗೆ ನಿರೂಪಕಿ ಮುಂಬರುವ ‘ಒಡಿಯನ್’ ಚಿತ್ರದ ಬಗ್ಗೆ ಪ್ರಶ್ನೆಯನ್ನು ಹಾಕಿದರು. ಈ ಹಿಂದೆ ‘ಭ್ರಮಯುಗಂ’, ‘ಭೂತಕಾಲಂ’ ಹಾಗೂ ‘ಡೈಸ್ ಇರೈ’ ಚಿತ್ರಗಳನ್ನು ನಿರ್ದೇಶಿಸಿ ಸದ್ಯ ಬಹು ನಂಬುಗೆಯ ನಿರ್ದೇಶಕ ಎನಿಸಿಕೊಂಡಿರುವ ರಾಹುಲ್ ಸದಾಶಿವನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಹುಟ್ಟಲು ಕಾರಣವಾಗಿದೆ.

ಈ ಚಿತ್ರದ ಕುರಿತು ಪ್ರಶ್ನೆ ಹಾಕಿ ನಿರ್ಮಾಣದ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಪೃಥ್ವಿರಾಜ್ ಸುಕುಮಾರನ್ ‘ರಾಹುಲ್ ನನಗೆ ಈ ಕಥೆಯನ್ನು ಹೇಳಿದಾಗ ನಾನು ಈ ಚಿತ್ರಕ್ಕೆ ಬಂಡವಾಳ ಹಾಕಿದ್ರೆ ಮಾತ್ರ ನಟಿಸುತ್ತೇನೆ ಎಂದು ಹೇಳಿದೆ. ಅದಕ್ಕೆ ರಾಹುಲ್ ಇದನ್ನು ನೀವೇ ನಿರ್ಮಿಸಿದ್ದಲ್ಲಿ ಸಂತಸವಂತೂ ಇದೆ. ಆದರೆ ಧರ್ಮ ಪ್ರೊಡಕ್ಷನ್ಸ್ ಜತೆ ನನಗೆ ಒಂದು ಸಣ್ಣ ಒಪ್ಪಂದವಿದೆ ಎಂದ. ಅದೇ ಜಾಗದಲ್ಲಿ ಧರ್ಮ ಪ್ರೊಡಕ್ಷನ್ಸ್ ಬಿಟ್ಟು ಬೇರೆ ಯಾವುದೇ ಚಿತ್ರ ನಿರ್ಮಾಣ ಸಂಸ್ಥೆ ಇದ್ದಿದ್ದರೆ ಹೇಗಾದರೂ ಮಾಡಿ ಚಿತ್ರವನ್ನು ನಾನೇ ನಿರ್ಮಿಸುವ ಹಾಗೆ ಮಾಡುತ್ತಿದ್ದೆ. ಆದರೆ ಕರಣ್ ಜೋಹರ್ ಜತೆ ನನಗೆ ಉತ್ತಮ ಬಾಂಧವ್ಯವಿರುವ ಕಾರಣ ಒಪ್ಪಿಕೊಂಡೆ. ಅಲ್ಲದೇ ರಾಹುಲ್ ಬಳಿ ಕರಣ್ ಬಳಿ ತೆರಳು. ಏನಾದರೂ ಸಮಸ್ಯೆ ಬಂದರೆ ನಾನು ಇದ್ದೇನೆ ಎಂದು ಹೇಳು ಎಂದೆ. ಕೆಲ ದಿನಗಳ ಬಳಿಕ ಕರಣ್ ನನಗೆ ಕರೆ ಮಾಡಿ ಏನೇ ತೊಂದರೆಯಾದರೂ ನಾನು ನೋಡಿಕೊಳ್ಳುತ್ತೇನೆ ಎಂದು ಹೇಗೆ ಹೇಳುತ್ತೀಯ? ನಾವು ಈ ಚಿತ್ರವನ್ನು ಮಾಡುತ್ತಿದ್ದೇವೆ ಎಂದರು’ ಎಂದು ಹೇಳಿದರು.

ಬಳಿಕ ಧರ್ಮ ಪ್ರೊಡಕ್ಷನ್ಸ್ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ತನಗೆ ಖುಷಿ ತಂದಿದೆ ಎಂದ ಪೃಥ್ವಿರಾಜ್ ಅದೇ ರೀತಿ ಇತರೆ ಚಿತ್ರರಂಗಗಳ ಹಲವಾರು ನಿರ್ಮಾಣ ಸಂಸ್ಥೆಗಳು ಮಲಯಾಳಂ ಚಿತ್ರರಂಗದತ್ತ ಕಣ್ಣಿಟ್ಟಿವೆ ಎಂಬುದು ಗೊತ್ತು. ಆ ಪೈಕಿ ಯಾರೇ ನಮ್ಮ ಚಿತ್ರರಂಗಕ್ಕೆ ಬನ್ನಿ, ಆದರೆ ಇಲ್ಲಿ ಏನನ್ನೂ ಬದಲಿಸಲು ಹೋಗಬೇಡಿ, ಬದಲಾಗಿ ಇಲ್ಲಿಂದ ಕಲಿತುಕೊಂಡು ಹೋಗಿ ಎಂದು ಖಡಕ್ ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ತಮ್ಮ ಚಿತ್ರಗಳ ಶೈಲಿಯನ್ನು ಬದಲಿಸುವ ಕೆಲಸ ಮಾಡಬೇಡಿ ಎಂದು ಚಿತ್ರ ನಿರ್ಮಾಣ ಸಂಸ್ಥೆಗಳಿಗೆ ಕಿವಿಮಾತು ಹೇಳಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular