ರಾಯಚೂರು: ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬರು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಇದು ಕುಟುಂಬದವರಿಗೆ ತೀವ್ರ ಅನುಮಾನ ಮೂಡಿಸಿದೆ.
ರಾಯಚೂರಿನ ದೇವದುರ್ಗ ತಾಲೂಕಿನ ಮೆದರಗೋಳ ಗ್ರಾಮದ ನಿವಾಸಿ ಭೀಮರಾಯ (42) ಮೃತ ಕೈದಿ. ಕೊಲೆ ಪ್ರಕರಣವೊಂದರಲ್ಲಿ ಕಳೆದ 2 ತಿಂಗಳ ಹಿಂದೆ ಜೈಲು ಸೇರಿದ್ದ ಭೀಮರಾಯಗೆ ನಿನ್ನೆ ಹೃದಯಾಘಾತ ಸಂಭವಿಸಿತ್ತು.
ತಕ್ಷಣ ಆತನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭೀಮರಾಯ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹಾಗೂ ಜೈಲು ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಭೀಮರಾಯನ ಸಾವಿಗೆ ಪೊಲೀಸರೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದು, ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ.

