ಬೆಂಗಳೂರು: ಚಳಿಗಾಲದ ಹಿತವಾದ ಹವಾಮಾನ ಎಲ್ಲರಿಗೂ ಇಷ್ಟ. ಸ್ವೆಟರ್ ಮಫ್ಲರ್ ಧರಿಸಿ ಬೆಚ್ಚಗೆ ಇರಲು ಬಯಸುತ್ತೇವೆ. ಆದರೆ, ಇದೇ ಸಮಯದಲ್ಲಿ ನಿಮ್ಮ ಮೆದುಳಿನ ಆರೋಗ್ಯದ ಬಗ್ಗೆಯೂ ಜಾಗರೂಕರಾಗಿರಿ ಹೌದು ತಾಪಮಾನವು 13°C ಗಿಂತ ಕಡಿಮೆಯಾದಾಗ ಇಸ್ಕೆಮಿಕ್ ಸ್ಟ್ರೋಕ್ (Ischemic Stroke) ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಚಳಿಗಾಲದಲ್ಲೇ ಯಾಕೆ ಈ ಸ್ಟ್ರೋಕ್ ಅಪಾಯ ಹೆಚ್ಚು?
ವೈದ್ಯರ ಪ್ರಕಾರ, ಶೀತ ವಾತಾವರಣವು ನಮ್ಮ ದೇಹದಲ್ಲಿ ಈ ಕೆಳಗಿನ ಬದಲಾವಣೆಗಳನ್ನು ತರುತ್ತದೆ:
ರಕ್ತನಾಳಗಳ ಸಂಕೋಚನ: ಚಳಿಯಾದಾಗ ದೇಹದ ಶಾಖ ಉಳಿಸಿಕೊಳ್ಳಲು ರಕ್ತನಾಳಗಳು ಇಕ್ಕಟ್ಟಾಗುತ್ತವೆ. ಇದರಿಂದ ರಕ್ತದೊತ್ತಡ (BP) ದಿಢೀರ್ ಏರಿಕೆಯಾಗಿ ಮೆದುಳಿನ ಮೇಲೆ ಒತ್ತಡ ಬೀಳುತ್ತದೆ.
ರಕ್ತ ದಪ್ಪವಾಗುವುದು: ತಂಪು ಹವಾಮಾನದಲ್ಲಿ ರಕ್ತದ ಸಾಂದ್ರತೆ ಹೆಚ್ಚಾಗುತ್ತದೆ. ಇದರಿಂದ ರಕ್ತ ಹೆಪ್ಪುಗಟ್ಟುವ (Clots) ಸಾಧ್ಯತೆ ಹೆಚ್ಚು. ಈ ಹೆಪ್ಪುಗಟ್ಟಿದ ರಕ್ತ ಮೆದುಳಿಗೆ ಸಂಚರಿಸದಿದ್ದರೆ ಪಾರ್ಶ್ವವಾಯು ಸಂಭವಿಸುತ್ತದೆ.
ನಿರ್ಜಲೀಕರಣ (Dehydration): ಚಳಿಗಾಲದಲ್ಲಿ ನಾವು ನೀರು ಕುಡಿಯುವುದನ್ನು ಮರೆಯುತ್ತೇವೆ. ನೀರಿಲ್ಲದಿದ್ದಾಗ ರಕ್ತ ಮತ್ತಷ್ಟು ದಪ್ಪವಾಗಿ ಅಪಾಯವನ್ನು ಹೆಚ್ಚಿಸುತ್ತದೆ.
ಸೋಮಾರಿತನ: ವ್ಯಾಯಾಮ ಕಡಿಮೆ ಮಾಡುವುದು ಮತ್ತು ಹೆಚ್ಚು ಕ್ಯಾಲೋರಿ ಆಹಾರ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗಿ ಸ್ಟ್ರೋಕ್‌ಗೆ ದಾರಿ ಮಾಡಿಕೊಡುತ್ತದೆ.
ಪಾರ್ಶ್ವವಾಯು ಲಕ್ಷಣಗಳನ್ನು ಗುರುತಿಸುವುದು ಹೇಗೆ?
ಯಾರಿಗಾದರೂ ಈ ಕೆಳಗಿನ ಲಕ್ಷಣಗಳು ಕಂಡರೆ ವಿಳಂಬ ಮಾಡಬೇಡಿ. ‘ಗೋಲ್ಡನ್ ಅವರ್’ (ಮೊದಲ ಒಂದು ಗಂಟೆ) ಒಳಗೆ ಚಿಕಿತ್ಸೆ ಸಿಕ್ಕರೆ ಪ್ರಾಣ ಉಳಿಸಬಹುದು:
ಸಮತೋಲನ ನಷ್ಟ: ನಡೆಯುವಾಗ ಸಮತೋಲನ ತಪ್ಪುವುದು.
ದೃಷ್ಟಿ ದೋಷ: ಕಣ್ಣಿನ ದೃಷ್ಟಿಯಲ್ಲಿ ದಿಢೀರ್ ಬದಲಾವಣೆ.
ಮುಖದ ಬದಲಾವಣೆ: ನಗುವಾಗ ಮುಖ ಒಂದು ಕಡೆ ಜೋಲು ಬೀಳುವುದು (Face Drooping).
ತೋಳಿನ ದೌರ್ಬಲ್ಯ: ಕೈಗಳನ್ನು ಎತ್ತಲು ಸಾಧ್ಯವಾಗದಿರುವುದು.
ಮಾತಿನ ತೊಂದರೆ: ಮಾತು ತೊದಲುವಿಕೆ ಅಥವಾ ಸ್ಪಷ್ಟವಾಗಿ ಮಾತನಾಡಲು ಕಷ್ಟವಾಗುವುದು.
ಬಚಾವ್ ಆಗುವುದು ಹೇಗೆ? ತಜ್ಞರ ಟಿಪ್ಸ್ ಇಲ್ಲಿದೆ:
ಶೇಕಡಾ 80 ರಷ್ಟು ಪಾರ್ಶ್ವವಾಯುಗಳನ್ನು ಸರಿಯಾದ ಜಾಗೃತಿಯಿಂದ ತಡೆಯಬಹುದು. ಪ್ರತಿದಿನ ಕನಿಷ್ಠ 30 ನಿಮಿಷ ವಾಕಿಂಗ್ ಮಾಡುವುದರಿಂದ ಪಾರ್ಶ್ವವಾಯು ಅಪಾಯವನ್ನು ಶೇ. 25 ರಷ್ಟು ಕಡಿಮೆ ಮಾಡಬಹುದು, ಎನ್ನುತ್ತಾರೆ ನರವಿಜ್ಞಾನಿ ಡಾ. ಅರವಿಂದ್ ಶರ್ಮಾ.
ಬಿಪಿ ಚೆಕ್ ಮಾಡಿ: ನಿಯಮಿತವಾಗಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ.
ನೀರು ಕುಡಿಯಿರಿ: ಬಾಯಾರಿಕೆ ಇಲ್ಲದಿದ್ದರೂ ನಿಯಮಿತವಾಗಿ ನೀರು ಕುಡಿಯಿರಿ.
ಬೆಚ್ಚಗೆ ಇರಿ: ಶೀತದಿಂದ ರಕ್ಷಿಸಿಕೊಳ್ಳಲು ಉಣ್ಣೆಯ ಬಟ್ಟೆಗಳನ್ನು ಧರಿಸಿ.
ಸೋಂಕುಗಳಿಂದ ದೂರವಿರಿ: ನೆಗಡಿ, ಜ್ವರ ಬಂದಾಗ ನಿರ್ಲಕ್ಷ್ಯ ಮಾಡಬೇಡಿ, ಇದು ರಕ್ತನಾಳಗಳ ಮೇಲೆ ಪರಿಣಾಮ ಬೀರಬಹುದು.

