HomeIndiaಪ್ರಯಾಗ್‌ರಾಜ್‌ನಲ್ಲಿ ತಡರಾತ್ರಿ ಭೀಕರ ಕೃತ್ಯ: ಗರ್ಲ್ಸ್ ಹಾಸ್ಟೆಲ್ ರೂಮಿಗೆ ನುಗ್ಗಿ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ...

ಪ್ರಯಾಗ್‌ರಾಜ್‌ನಲ್ಲಿ ತಡರಾತ್ರಿ ಭೀಕರ ಕೃತ್ಯ: ಗರ್ಲ್ಸ್ ಹಾಸ್ಟೆಲ್ ರೂಮಿಗೆ ನುಗ್ಗಿ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ ಮಾಲೀಕನ ಮಗ

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಯನ್ನು ಸಂಪೂರ್ಣವಾಗಿ ಪ್ರಶ್ನಿಸುವಂತಹ ಮತ್ತೊಂದು ಅತ್ಯಂತ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಅಮೇಥಿ ಮೂಲದ ಇಬ್ಬರು ವಿದ್ಯಾರ್ಥಿನಿಯರ ಕೋಣೆಗೆ ಮಧ್ಯರಾತ್ರಿ ಮದ್ಯದ ಅಮಲಿನಲ್ಲಿ ನುಗ್ಗಿದ ಹಾಸ್ಟೆಲ್ ಮಾಲೀಕನ ಮಗ, ಯುವತಿಯರ ಕೂದಲು ಹಿಡಿದು ಎಳೆದಾಡಿ, ಕೆನ್ನೆಗೆ ಬಾರಿಸಿ ವಿಕೃತ ಅಟ್ಟಹಾಸ ಮೆರೆದಿದ್ದಾನೆ

ಪ್ರಯಾಗ್‌ರಾಜ್‌ನ ಶಿವಕುಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಭೀಕರ ಕೃತ್ಯ ನಡೆದಿದ್ದು, ಆರೋಪಿಯನ್ನು ಶುಭಂ ದ್ವಿವೇದಿ ಎಂದು ಗುರುತಿಸಲಾಗಿದೆ. ಈ ಘಟನೆಯ 30 ಸೆಕೆಂಡುಗಳ ಅತ್ಯಂತ ಕಳವಳಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂತ್ರಸ್ತ ವಿದ್ಯಾರ್ಥಿನಿಯರು ನೀಡಿರುವ ದೂರಿನ ಪ್ರಕಾರ, ಮೇ 18 ರಂದು ತಡರಾತ್ರಿ 2 ಗಂಟೆಗೆ ಹಾಸ್ಟೆಲ್ ಮಾಲೀಕನ ಮಗ ಶುಭಂ ದ್ವಿವೇದಿ ಫುಲ್ ಮದ್ಯದ ಅಮಲಿನಲ್ಲಿ ಕೆಟ್ಟ ಉದ್ದೇಶದಿಂದ ಯುವತಿಯರ ರೂಮಿನ ಬಾಗಿಲು ತಟ್ಟಿದ್ದಾನೆ. ವಿದ್ಯಾರ್ಥಿನಿಯರು ಭಯದಿಂದ ಬಾಗಿಲು ತೆರೆಯಲು ನಿರಾಕರಿಸಿದಾಗ, ಆಕ್ರೋಶಗೊಂಡ ಆರೋಪಿ ಅವರ ರೂಮನ್ನು ಹೊರಗಿನಿಂದ ಲಾಕ್ ಮಾಡಿದ್ದಾನೆ.

ಹೊರಗೆ ಬರಲಾಗದೆ ಸಿಲುಕಿಕೊಂಡ ಯುವತಿಯರು ಜೀವಭಯದಿಂದ ಜೋರಾಗಿ ಕಿರುಚಾಡಲು ಪ್ರಾರಂಭಿಸಿದಾಗ, ಆರೋಪಿಯ ತಾಯಿ ಸ್ಥಳಕ್ಕೆ ಆಗಮಿಸಿದ್ದಾರೆ. ತಾಯಿ ಬಂದ ನಂತರ ಆರೋಪಿ ಬಾಗಿಲು ತೆರೆದಿದ್ದಾನಾದರೂ, ತಾಯಿಯ ಎದುರೇ ವಿದ್ಯಾರ್ಥಿನಿಯರ ಮೇಲೆ ಮತ್ತೆ ಮುಗಿಬಿದ್ದು ಭೀಕರವಾಗಿ ಹಲ್ಲೆ ನಡೆಸಿ, ಅವರ ಕೂದಲನ್ನು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ

ಪೊಲೀಸರ ಸಮ್ಮುಖದಲ್ಲೇ ಒಡೆದ ಗಾಜಿನಿಂದ ಅಟ್ಯಾಕ್, ಕೊಲೆ ಬೆದರಿಕೆ

ಘಟನೆ ನಡೆಯುತ್ತಿದ್ದಂತೆ ಸಂತ್ರಸ್ತ ವಿದ್ಯಾರ್ಥಿನಿಯರು ತಕ್ಷಣವೇ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಸ್ಥಳಕ್ಕೆ ಪೊಲೀಸರು ಬಂದ ಮೇಲೂ ಆರೋಪಿಯ ಉದ್ಧಟತನ ಕಮ್ಮಿಯಾಗಿರಲಿಲ್ಲ!

ಖಾಕಿ ಮುಂದೆಯೇ ಅಟ್ಯಾಕ್: ಸ್ಥಳಕ್ಕೆ ಪೊಲೀಸರು ಬಂದಿದ್ದರೂ ಅವರ ಎದುರಲ್ಲೇ ಒಡೆದ ಗಾಜಿನ ಚೂರಿನಿಂದ ಯುವತಿಯ ಮೇಲೆ ದಾಳಿ ನಡೆಸಿದ ಆರೋಪಿ ಶುಭಂ, “ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ” ಎಂದು ಬಹಿರಂಗವಾಗಿಯೇ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ.

ಕಳೆದ 10 ದಿನಗಳಿಂದ ಸತತವಾಗಿ ನೀಡ್ತಿದ್ದ ಟಾರ್ಚರ್

ಮೂಲತಃ ಅಮೇಠಿ ಜಿಲ್ಲೆಯವರಾದ ಈ ವಿದ್ಯಾರ್ಥಿನಿಯರು ಪ್ರಯಾಗ್‌ರಾಜ್‌ನಲ್ಲಿ ರೂಮ್ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಿಪೇರ್ ಆಗುತ್ತಿದ್ದರು. ಆರೋಪಿ ಶುಭಂ ದ್ವಿವೇದಿ ಕಳೆದ 10 ದಿನಗಳಿಂದ ತಮಗೆ ಫೋನ್ ಹಾಗೂ ಸಂದೇಶಗಳ (Messages) ಮೂಲಕ ನಿರಂತರವಾಗಿ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಮುಖ್ಯ ಸಂತ್ರಸ್ತೆ ಆರೋಪಿಸಿದ್ದಾಳೆ.

ವಿದ್ಯಾರ್ಥಿನಿಯರ ದೂರಿನ ಆಧಾರದ ಮೇಲೆ ಶಿವಕುಟಿ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರಾದರೂ, ನ್ಯಾಯಾಲಯ ಆತನಿಗೆ ಸದ್ಯ ಜಾಮೀನು (Bail) ಮಂಜೂರು ಮಾಡಿದೆ. ಗರ್ಲ್ಸ್ ಹಾಸ್ಟೆಲ್‌ನಲ್ಲೇ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿರುವ ಈ ಘಟನೆ ದೇಶಾದ್ಯಂತ ತೀವ್ರ ಆತಂಕ ಮೂಡಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular