ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ನಡೆದು ನಾಲ್ಕು ವರ್ಷಗಳ ಬಳಿಕ ಎನ್ ಐಎ ಅಧಿಕಾರಿಗಳು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ನೌಷಾದ್ (32) ಹಾಗೂ ಅಬ್ದುಲ್ ನಾಸಿರ್ (41)ಬಂಧಿತ ಆರೋಪಿಗಳು.
ಬೆಳ್ತಂಗಡಿಯ ಪದಂಗಡಿ ಪೊಯ್ಯಗುಡ್ಡೆ ನಿವಾಸಿ ನೌಷಾದ್ ಹಾಗೂ ಕೊಡಗಿನ ಸೋಮವಾರಪೇಟೆ ನಿವಾಸಿ ಅಬ್ದುಲ್ ನಾಸೀರ್ ನನ್ನು ಎನ್ ಐಎ ಬಂಧಿಸಿದೆ. ನೌಷಾದ್ ಬೆಂಗಳೂರಿನಲ್ಲಿ ಅಡಗಿ ಕುಳಿತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್ ಐಎ ತಂಡ ನೌಷಾದ್ ನನ್ನು ಬಂಧಿಸಿದೆ. ಕೇರಳಂನ ಕೊಚ್ಚಿಯಲ್ಲಿ ನಾಸೀರ್ ನನ್ನು ಬಂಧಿಸಲಾಗಿದೆ.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರು ನನ್ನು 2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು.
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ‘ಸರ್ವಿಸ್ ಟೀಮ್’ ಸದಸ್ಯರು ಕೋಮು ಸೌಹಾರ್ದತೆ ಕದಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯಿಂದ ಬಹಿರಂಗವಾಗಿದೆ. ಸ್ಥಳೀಯ ಮುಸ್ಲಿಂ ಯುವಕ ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಈ ಕೃತ್ಯ ನಡೆಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

