ಪಾಟ್ನಾ: ದೇಶದ ರಾಜಕೀಯದಲ್ಲಿ ತೆರೆಮರೆಯ ತಂತ್ರಗಾರನಾಗಿ ಹಲವು ಪಕ್ಷಗಳನ್ನು ಅಧಿಕಾರಕ್ಕೆ ತಂದಿದ್ದ ಪ್ರಶಾಂತ್ ಕಿಶೋರ್ (PK), ಇದೀಗ ಮೊದಲ ಬಾರಿಗೆ ಖುದ್ದಾಗಿ ನೇರ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಬಿಹಾರದ ಹೈಪ್ರೊಫೈಲ್ ಕ್ಷೇತ್ರವಾಗಿರುವ ಬಂಕಿಪುರ ವಿಧಾನಸಭಾ ಉಪಚುನಾವಣೆಗಾಗಿ ಸೋಮವಾರ ಭರ್ಜರಿ ರೋಡ್ ಶೋ ನಡೆಸಿದ ಅವರು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದ ಜೊತೆಗೆ ಭಾರತೀಯ ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಕೋಟ್ಯಂತರ ರೂಪಾಯಿ ಆಸ್ತಿಯ ವಿವರವನ್ನು ಘೋಷಿಸಿಕೊಂಡಿದ್ದಾರೆ.
ಅಫಿಡವಿಟ್ ಪ್ರಕಾರ, ಪ್ರಶಾಂತ್ ಕಿಶೋರ್ ಹಾಗೂ ಅವರ ಪತ್ನಿ ಡಾ. ಜಹಾನ್ವಿ ದಾಸ್ ಅವರ ಒಟ್ಟು ಕುಟುಂಬದ ಆಸ್ತಿ ಮೌಲ್ಯ ಬರೋಬ್ಬರಿ 198 ಕೋಟಿ ರೂ. ಗೂ ಅಧಿಕ ಎಂದು ತಿಳಿದುಬಂದಿದೆ
ಪ್ರಶಾಂತ್ ಕಿಶೋರ್ ಕುಟುಂಬದ ಆಸ್ತಿ ವಿವರ ಹೀಗಿದೆ:
ಪಿಜೆ ವೈಯಕ್ತಿಕ ಆಸ್ತಿ (ಒಟ್ಟು: 96.06 ಕೋಟಿ ರೂ.)
ಚರ ಆಸ್ತಿ: 22.19 ಕೋಟಿ ರೂ. (ಬ್ಯಾಂಕ್ ಎಫ್‌ಡಿ ಹಾಗೂ ಶೇರು ಮಾರುಕಟ್ಟೆ ಹೂಡಿಕೆಗಳು).
ಸ್ಥಿರ ಆಸ್ತಿ: 73.87 ಕೋಟಿ ರೂ. (ಬಿಹಾರದ ರೋಹ್ತಾಸ್‌ನಲ್ಲಿರುವ 3 ಎಕರೆ ವಿಸ್ತೀರ್ಣದ ಹಳೆಯ ರೈಸ್ ಮಿಲ್ ಜಾಗ ಹಾಗೂ ವಿವಿಧ ಮಹಾನಗರಗಳಲ್ಲಿರುವ ಫ್ಲ್ಯಾಟ್‌ಗಳು).
ಕೈಯಲ್ಲಿರುವ ನಗದು: 65,570 ರೂ.
ಸಾಲ: 5.77 ಕೋಟಿ ರೂ.
ಪತ್ನಿ ಡಾ. ಜಹಾನ್ವಿ ದಾಸ್ ಆಸ್ತಿ (ಒಟ್ಟು: 101.93 ಕೋಟಿ ರೂ.)
ದೆಹಲಿಯ ಪ್ರಸಿದ್ಧ ಅಪೊಲೊ ಇಂದ್ರಪ್ರಸ್ಥ ಆಸ್ಪತ್ರೆಯಲ್ಲಿ ಹಿರಿಯ ಸಲಹೆಗಾರರಾಗಿರುವ ಪ್ರಶಾಂತ್ ಕಿಶೋರ್ ಅವರ ಪತ್ನಿ ಜಹಾನ್ವಿ ಅವರು ಪತಿಗಿಂತಲೂ ಶ್ರೀಮಂತರಾಗಿದ್ದಾರೆ
ಚರ ಆಸ್ತಿ: 89.51 ಕೋಟಿ ರೂ.
ಸ್ಥಿರ ಆಸ್ತಿ: 12.42 ಕೋಟಿ ರೂ.
ಚಿನ್ನಾಭರಣ: 64.12 ಲಕ್ಷ ರೂ. ಮೌಲ್ಯದ 475 ಗ್ರಾಂ ಚಿನ್ನ ಹಾಗೂ 200 ಗ್ರಾಂ ಬೆಳ್ಳಿ.
ಕೈಯಲ್ಲಿರುವ ನಗದು: 1,95,200 ರೂ.
ಸಾಲ: 55.38 ಲಕ್ಷ ರೂ.
ಸ್ವಂತ ಕಂಪನಿಯಿಂದ ಸ್ವಂತ ಪಕ್ಷಕ್ಕೆ 85 ಕೋಟಿ ದೇಣಿಗೆ
ಪ್ರಶಾಂತ್ ಕಿಶೋರ್ ಅವರು ‘ವೇಧಾಸ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಖಾಸಗಿ ಕಂಪನಿಯಲ್ಲಿ ಶೇ. 100 ರಷ್ಟು ಸಂಪೂರ್ಣ ಮಾಲೀಕತ್ವ ಹೊಂದಿದ್ದಾರೆ. ಈ ಕಂಪನಿಯ ಮೌಲ್ಯವೇ ಸುಮಾರು 95.26 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ವಿಶೇಷವೆಂದರೆ, ಇದೇ ಕಂಪನಿಯ ಮೂಲಕ ಪ್ರಶಾಂತ್ ಕಿಶೋರ್ ಅವರು ತಮ್ಮದೇ ಆದ ಜನ ಸುರಾಜ್ ಪಕ್ಷಕ್ಕೆ ಬರೋಬ್ಬರಿ 85 ಕೋಟಿ ರೂ. ಹಾಗೂ ‘ಜನ ಸುರಾಜ್ ಫೌಂಡೇಶನ್’ಗೆ 50 ಲಕ್ಷ ರೂ. ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. ತಾವು ರಾಜಕೀಯಕ್ಕೆ ಬರುವ ಮುನ್ನ ಕಾರ್ಪೊರೇಟ್ ಸಲಹೆಗಾರರಾಗಿ ಕೇವಲ 3 ವರ್ಷಗಳಲ್ಲಿ 241 ಕೋಟಿ ರೂ. ಸಂಪಾದಿಸಿದ್ದಾಗಿ ಪಿಕೆ ಈ ಹಿಂದೆ ಬಹಿರಂಗಪಡಿಸಿದ್ದರು.
ಪ್ರಶಾಂತ್ ಕಿಶೋರ್ ಅವರ ಶೈಕ್ಷಣಿಕ ಅರ್ಹತೆ ಏನು?
ಕೇವಲ ರಾಜಕೀಯ ತಂತ್ರಗಾರಿಕೆಯಲ್ಲಿ ಮಾತ್ರವಲ್ಲ, ಶಿಕ್ಷಣದಲ್ಲೂ ಪಿಕೆ ಸಖತ್ ಸ್ಟ್ರಾಂಗ್ ಆಗಿದ್ದಾರೆ:
10ನೇ ತರಗತಿ: 1991 ರಲ್ಲಿ ಬಿಹಾರದ ಬಕ್ಸಾರ್‌ನ ಎಂ.ಪಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ.
12ನೇ ತರಗತಿ: 1993 ರಲ್ಲಿ ಪ್ರಸಿದ್ಧ ಪಾಟ್ನಾ ವಿಜ್ಞಾನ ಕಾಲೇಜಿನಿಂದ ಪೂರ್ಣ.
ಬಿಬಿಎ (BBA) ಪದವಿ: 1996 – 1999 ರ ಅವಧಿಯಲ್ಲಿ ಲಕ್ನೋ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ಪದವಿ.
MHA ಪದವಿ: 2001 – 2003 ರ ಅವಧಿಯಲ್ಲಿ ಹೈದರಾಬಾದ್‌ನ ‘ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾ’ದಿಂದ (ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ) ಮಾಸ್ಟರ್ ಆಫ್ ಹೆಲ್ತ್ ಅಡ್ಮಿನಿಸ್ಟ್ರೇಷನ್ ಪದವಿ.
ಫ್ರೆಂಚ್ ಪ್ರಾವೀಣ್ಯತೆ: 2010 ರಲ್ಲಿ ಫ್ರಾನ್ಸ್‌ನ ಕ್ಲರ್ಮಾಂಟ್-ಫೆರಾಂಡ್ ವಿಶ್ವವಿದ್ಯಾಲಯದ ಸಂಸ್ಥೆಯೊಂದರಲ್ಲಿ ಅತ್ಯುನ್ನತ ಫ್ರೆಂಚ್ ಭಾಷಾ ತರಬೇತಿ ಪಡೆದಿದ್ದಾರೆ.
ಬಂಕಿಪುರದಲ್ಲಿ ಉಪಚುನಾವಣೆ ನಡೆಯುತ್ತಿರುವುದು ಏಕೆ?
2021ರ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಯ ಭಾರಿ ಯಶಸ್ಸಿನ ಬಳಿಕ, ಪ್ರಶಾಂತ್ ಕಿಶೋರ್ ಅವರು ಇತರ ಪಕ್ಷಗಳಿಗೆ ತಂತ್ರಜ್ಞನಾಗಿ ಕೆಲಸ ಮಾಡುವುದನ್ನು ನಿಲ್ಲಿಸಿ ತಮ್ಮದೇ ಆದ ‘ಜನ ಸುರಾಜ್’ ಸಂಘಟನೆ ಕಟ್ಟಿದ್ದರು.
ಇತ್ತೀಚೆಗೆ ಬಂಕಿಪುರ ಕ್ಷೇತ್ರದ ಶಾಸಕರಾಗಿದ್ದ ಬಿಜೆಪಿಯ ಪ್ರಭಾವಿ ನಾಯಕ ನಿತಿನ್ ನಬಿನ್ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಹಾಗೂ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಕಾರಣ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ತೆರವಾದ ಈ ಸ್ಥಾನಕ್ಕೆ ಈಗ ಉಪಚುನಾವಣೆ ಘೋಷಣೆಯಾಗಿದೆ. ಜುಲೈ 30 ರಂದು ಇಲ್ಲಿ ಮತದಾನ ನಡೆಯಲಿದ್ದು, ಆಗಸ್ಟ್ 3 ರಂದು ಫಲಿತಾಂಶ ಹೊರಬೀಳಲಿದೆ. ಸದ್ಯ ಬಿಜೆಪಿ ಅಭ್ಯರ್ಥಿ ನೀರಜ್ ಸಿನ್ಹಾ ಮತ್ತು ಜನ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ನಡುವೆ ಬಂಕಿಪುರದಲ್ಲಿ ನೇರ ಹಾಗೂ ಜಿದ್ದಾಜಿದ್ದಿನ ಫೈಟ್ ಏರ್ಪಟ್ಟಿದ್ದು, ಇಡೀ ದೇಶದ ಕಣ್ಣು ಈ ಫಲಿತಾಂಶದ ಮೇಲಿದೆ.

