ಬೆಂಗಳೂರು: ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಕೋರ್ಟ್ ಸೂಚನೆ ನೀಡಿದೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಸಾಕ್ಷ್ಯ ದಾಖಲಿಸಿದ ಬಳಿಕ ಬೆದರಿಕೆ ಕರೆಗಳು ಬಂದಿವೆ ಎಂದು ಪ್ರಮುಖ ಸಾಕ್ಷಿಯೊಬ್ಬರು ವಿಚಾರಣೆ ವೇಳೆ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ತಮ್ಮ ಹಾಗೂ ತಮ್ಮ ಮಗನ ಸುರಕ್ಷತೆ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದ 43 ವರ್ಷದ ಸಮಾಜ ಸೇವಕಿ ಜುಲೈ 6, 2026ರಂದು ಪ್ರಾಸಿಕ್ಯೂಷನ್ ಸಾಕ್ಷಿ-4 ಆಗಿ ನ್ಯಾಯಾಲಯದಲ್ಲಿ ಸಾಕ್ಷ್ಯ ದಾಖಲಿಸಿದ್ದರು. ಸಾಕ್ಷ್ಯ ಹೇಳಿದ ಬಳಿಕ ತಮಗೆ ಬೆದರಿಕೆ ಕರೆಗಳು ಬರುತ್ತಿವೆ. ನನಗೆ ಅಥವಾ ನನ್ನ ಮಗನಿಗೆ ಏನಾದರೂ ಆದರೆ ಅದಕ್ಕೆ ಆರೋಪಿಗಳೇ ಹೊಣೆ ಎಂದು ಸಾಕ್ಷಿದಾರರು ನ್ಯಾಯಾಲಯದಲ್ಲಿ ಹೇಳಿದ್ದಾರೆ. ಆರೋಪಿಗಳಿಂದ ಜೀವಕ್ಕೆ ಅಪಾಯವಿರುವ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಾಕ್ಷಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ (ADGP) ಬೆದರಿಕೆ ಆರೋಪದ ಬಗ್ಗೆ ತನಿಖೆ ನಡೆಸಿ ಮುಂದಿನ ವಿಚಾರಣೆ ದಿನ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.
ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಕೇಸ್ ನಲ್ಲಿ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಕೆಲ ದಿನಗಳ ಹಿಂದೆ ಪ್ರಜ್ವಲ್ ರೇವಣ್ಣ ಇರುವ ಹೈ ಸೆಕ್ಯುರಿಟಿ ಬ್ಯಾರಕ್‌ನಲ್ಲಿ ಪ್ರಜ್ವಲ್ ರೇವಣ್ಣ ಇದ್ದ ಸೆಲ್‌ನಿಂದ ಮೊಬೈಲ್ ಫೋನ್, ಚಾರ್ಜರ್, ಪೆನ್ ಡ್ರೈವ್ ಹಾಗೂ ನೋಟ್ ಬುಕ್ ಗಳನ್ನು ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

