ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಆರೋಪಿಯಾಗಿರುವ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷ ಬಿಜೆಪಿ ಸದನದ ಒಳಗೂ, ಹೊರಗೂ ನಿರಂತರ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಮತ್ತೊಂದು ನಿಟ್ಟಿನ ಹೋರಾಟಕ್ಕೆ ಬಿಜೆಪಿ ನಾಯಕರು ಸಜ್ಜಾಗಿದ್ದಾರೆ.
ನಾಗೇಂದ್ರ ರಾಜೀನಮೆಗೆ ಆಗ್ರಹಿಸಿ ಈಗಾಗಲೇ ವಿಧಾನಸಭೆ ಹಾಗೂ ಪರಿಷತ್ ಕಲಾಪದಲ್ಲೂ ಸಹ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿವೆ. ಮತ್ತೊಂದೆಡೆ ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲಿಯೂ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ಈ ನಡುವೆ ಬಿಜೆಪಿ ನಾಯಕರು ಮತ್ತೊಂದು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ದಾವಣಗೆರೆ ಜಿಲ್ಲೆ ಜಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆಗೆ ಬಿಜೆಪಿ ನಾಯಕರು ಮುಂದಾಗಿದೆ. ಸುಮಾರು 170 ಕಿ.ಮೀ. ದೂರ, 20 ದಿನಗಳ ಕಾಲದ ಪಾದಯಾತ್ರೆ ಬಗ್ಗೆ ರೂಪರೇಷೆ ಸಿದ್ಧತೆ ನಡೆಸಿದ್ದು, ಈ ಪಾದಯಾತ್ರೆ, 11 ವಿಧಾನಸಭಾ ಕ್ಷೇತ್ರಗಳನ್ನು ಹಾದು ಹೋಗಲಿದೆ. ಮುಂದಿನ ವಾರದಿಂದಲೇ ಪಾದಯಾತ್ರೆ ಆರಂಭವಾಗುವ ಸಾಧ್ಯತೆ ಇದ್ದು, ಬಿಜೆಪಿಯ ಅಹಿಂದ ನಾಯಕರೆಲ್ಲರೂ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

