ಬೆಂಗಳೂರು: ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಕೇಸ್ ನಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಉಳಿದ 8 ಆರೋಪಿಗಳಿಗೂ ಸಂಕಷ್ಟ ಎದುರಾಗಿದೆ.
ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಪೆನ್ಡ್ರೈವ್ ಮೂಲಕ ಹಂಚಿದ 8 ಆರೋಪಿಗಳಿಗೆ ಸಮನ್ಸ್ ಜಾರಿ ಮಾಡುವಂತೆ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಆದೇಶ ಹೊರಡಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67ಎ, ಐಪಿಸಿ ಸೆ.509ರಡಿ ಕೇಸ್ನಲ್ಲಿ ಆರೋಪಿಗಳಿಗೆ ಸಮನ್ಸ್ ಜಾರಿಗೆ ನ್ಯಾಯಾಧೀಶ ಸಂದೀಪ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಪೆನ್ಡ್ರೈವ್ ಮೂಲಕ ಅಶ್ಲೀಲ ಫೋಟೋ, ವಿಡಿಯೋ ಹಂಚಿಕೆ ಪ್ರಕರಣರದ ಎ2 ನವೀನ್ ಗೌಡ, ಎ3 ಹೆಚ್.ಪಿ.ಲಿಖಿತ್, ಎ4 ಎಂ.ಜೆ.ನಿಶಾಂತ್, ಎ5 ಎಸ್.ಕೆ.ಕಿರಣ್, ಎ6 ಎಂ.ಜಿ.ಶರತ್, ಎ7 ಡಿ.ಎನ್.ತೇಜಸ್, ಎ8 ಸಿ.ಗಗನ್ ಕುಮಾರ್, ಎ9 ಹೆಚ್.ರೇವಂತ್ಗೆ ಸಮನ್ಸ್ ಜಾರಿಗೆ ಕೋರ್ಟ್ ಆದೇಶಿಸಿದೆ.
ಪ್ರಕರಣ ಸಂಬಂಧ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಹಾಗೂ ಬಿಜೆಪಿ ಚುನಾವಣಾ ಏಜೆಂಟ್ ಆಗಿದ್ದ ಎಂ.ಜಿ. ಪೂರ್ಣಚಂದ್ರ ತೇಜಸ್ವಿ ಅವರು ಹಾಸನ ಸಿಇಎನ್ ಪೊಲೀಸ್ ಠಾಣೆಗೆ 2024ರ ಏ.23ರಂದು ದೂರು ನೀಡಿದ್ದರು. ಹಾಸನ ಲೋಕಸಭೆ ಕ್ಷೇತ್ರದ ಚುನಾವಣೆ ಏ.26ರಂದು ನಿಗದಿಯಾಗಿತ್ತು. ಆರೋಪಿಗಳಾದ ನವೀನ್‌ಗೌಡ ಹಾಗೂ ಇತರರು ಏ.21ರಂದು ಸಂಜೆ 6.30ರಿಂದ ಹಾಸನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ನಕಲಿ ಅಶ್ಲೀಲ ಭಾವಚಿತ್ರ ಮತ್ತು ವಿಡಿಯೋಗಳನ್ನು ಒಳಗೊಂಡ ಸಿಡಿ ಹಾಗೂ ಪೆನ್ಡ್ರೈವ್ ಸಿದ್ಧಪಡಿಸಿಕೊಂಡಿದ್ದಾರೆ. ಬಳಿಕ ಕ್ಷೇತ್ರ ವ್ಯಾಪ್ತಿಯ ಮನೆ ಮನೆಗೆ ತೆರಳಿ ಮತದಾರರಿಗೆ ಹಂಚಿದ್ದಾರೆ. ವಾಟ್ಸ್ಆ್ಯಪ್/ಮೊಬೈಲ್ಗಳಲ್ಲಿ ತೋರಿಸಿ ಜನರಿಗೆ ದಿಕ್ಕು ತಪ್ಪಿಸಿ ಪ್ರಜ್ವಲ್ ರೇವಣ್ಣಗೆ ಮತ ಹಾಕದಂತೆ ಪ್ರಚೋದಿಸುತ್ತಿದ್ದಾರೆ. ಆ ಮೂಲಕ ಚುನಾವಣೆಯಲ್ಲಿ ನ್ಯಾಯಯುತ ಮತದಾನ ನಡೆಯುವುದನ್ನು ತಪ್ಪಿಸುವ ದುಷ್ಕೃತ್ಯ ಎಸಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.
ಈ ದೂರಿನ ಮೇರೆಗೆ ಅರ್ಜಿದಾರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 171 (ಜಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67(ಎ) ಅಡಿಯಲ್ಲಿ ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ಫೋಟೋ ಹಾಗೂ ವಿಡಿಯೋ ಪ್ರಕಟಿಸಿದ ಮತ್ತು ರವಾನಿಸಿದ ಆರೋಪದಲ್ಲಿ ಎಫ್‌ಐಆರ್ ದಾಖಲಾಗಿತ್ತು.

