ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜಿಲ್ಲಾ ಮಟ್ಟದ ‘ಪ್ರಜಾ ಸೇವೆ’ ಆಂದೋಲನ ಸಭೆ ಹಮ್ಮಿಕೊಂಡಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಉದ್ಘಾಟಿಸಿದರು.
ಶಿಕಾರಿಪುರದ ಸುವರ್ಣ ಸಂಸ್ಕೃತಿ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಅವರು ಮಾತನಾಡಿ, ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ, ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಪ್ರಜಾಸೇವೆ ಆಂದೋಲನವನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗಳಿಗೆ, ಗ್ರಾಮಾಂತರ ಪ್ರದೇಶದಿಂದ ರಾಜಧಾನಿ ಬೆಂಗಳೂರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿರುವುದು ಅತ್ಯಂತ ನೋವಿನ ಸಂಗತಿ. ಇದರಿಂದಾಗಿ ಜನರ ಹಣ ಸಮಯ ವ್ಯರ್ಥವಾಗುತ್ತಿದೆ. ಈ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ ‘ಪ್ರಜಾ ಸೇವೆ’ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಕಾಳಜಿಯಿಂದ ರೂಪುಗೊಂಡಿರುವ ಕಾರ್ಯಕ್ರಮವೆ ಪ್ರಜಾಸೇವೆ ಆಂದೋಲನ. ಸಚಿವರು, ಶಾಸಕರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಕುಂದು-ಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸಲಿದ್ದಾರೆ ಎಂದು ತಿಳಿಸಿದರು.
ಸಾರ್ವಜನಿಕರು ತಮ್ಮ ಸಮಸ್ಯೆಗಳ ಅರ್ಜಿಗಳನ್ನು ಹಿಡಿದು ಕಚೇರಿಗಳ ಸುತ್ತಾಡುವುದನ್ನು ತಪ್ಪಿಸುವ ಉದ್ದೇಶದಿಂದ ಪ್ರತ್ಯೇಕ ವ್ಯವಸ್ಥೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಡಳಿತ ಸಾರ್ವಜನಿಕರು ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಅಧಿಕಾರಿಗಳು ಸರ್ಕಾರಕ್ಕೆ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಸೇವೆ ಒದಗಿಸಬೇಕು. ಜನರ ತೆರಿಗೆಯ ಹಣ ಸದ್ವಿನಿಯೋಗವಾಗಬೇಕು ಎಂದರು.
ಜನರ ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲೂ ‘ಪ್ರಜಾ ಸೇವೆ’ ಆಂದೋಲನ ಕಾರ್ಯಕ್ರಮ ನಡೆಸಲಾಗುವುದು. ಅಧಿಕಾರಿಗಳು ಅರ್ಜಿಗಳನ್ನು ಕೇವಲ ಸ್ವೀಕರಿಸುವುದಕ್ಕೆ ಸೀಮಿತವಾಗದೆ, ಮಾನವೀಯ ನೆಲೆಯಲ್ಲಿ ಕಾನೂನುಬದ್ಧವಾಗಿ, ಪಕ್ಷಾತೀತವಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ವಿಶೇಷ ಗಮನಹರಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ. ರಾಘವೇಂದ್ರ ಅವರು ಮಾತನಾಡಿ, ಜಿಲ್ಲೆಯಲ್ಲಿ ಬರದ ಛಾಯೆ ಎದ್ದು ಕಾಣುತ್ತಿದೆ. ಜನ – ಜಾನುವಾರುಗಳ ರಕ್ಷಣೆ, ಜಲ ಮತ್ತು ವಿದ್ಯುತ್ ಕ್ಷಾಮ ತಲೆದೋರದಂತೆ ಜನಪ್ರತಿನಿದಿನಗಳು ಮತ್ತು ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿರುವಂತೆ ಮನವಿ ಮಾಡಿದರು.
ಏತ ನೀರಾವರಿ ಮೂಲಕ ಗ್ರಾಮೀಣ ಕೆರೆಗಳನ್ನು ತುಂಬಿಸಲಾಗುತ್ತಿದೆ. ಮಳೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಶೇ. 50 ರಷ್ಟು ಪ್ರಮಾಣದಲ್ಲಾದರೂ ಕೆರೆಗಳನ್ನು ತುಂಬಿಸಲು ಅಧಿಕಾರಿಗಳು ಗಮನಹರಿಸಬೇಕು ಎಂದ ಅವರು ಸಚಿವರು ನೀರಾವರಿ ಸಚಿವರೊಂದಿಗೆ ಚರ್ಚಿಸಿ ಪ್ರತ್ಯೇಕವಾದ ನೀರಾವರಿ ಯೋಜನೆ ಕೆರೆ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಇಲಾಖಾ ಅಧಿಕಾರಿಗಳ ಸಮನ್ವಯತೆಯ ಕೊರತೆಯಿಂದ ಸರ್ಕಾರದ ಯೋಜನೆಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. ಆದ್ದರಿಂದ ಆಂತರಿಕವಾಗಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡು ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ 4351 ಕೆರೆಗಳಿದ್ದು, ಆ ಪೈಕಿ 1017 ಕೆರೆಗಳ ಒತ್ತುವರಿಯಾಗಿದೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ನಗರದ ಮಹದೇವಪ್ಪ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಗೌಡ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಸಾಗರ ಮತ್ತು ಶಿವಮೊಗ್ಗದ ಉಪವಿಭಾಗಾಧಿಕಾರಿಗಳಾದ ವಿರೇಶ್, ಡಾ.ಮೈತ್ರಿ, ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿರುವ ಎಲ್ಲಾ ಗಣ್ಯರು ಕೃಷಿ ಇಲಾಖೆಯ ವಿವಿಧ ಯೋಜನೆಗಳ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಅಲ್ಲದೇ ಪಲಾನುಭವಿಗಳಿಗೆ ಕೃಷಿ ಹೊಂಡ ನಿರ್ಮಾಣಕ್ಕೆ ಕಾರ್ಯಾದೇಶ, ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಪಾಸ್ ಪುಸ್ತಕ, ಆಪ್ತಮಿತ್ರ ಯೋಜನೆಯಡಿ ಗ್ರಾಮ ಪಂಚಾಯಿತಿಗಳಿಗೆ ಸುರಕ್ಷತಾ ಕಿಟ್ ಮತ್ತಿತರ ಸೌಲತ್ತುಗಳನ್ನು ವಿತರಿಸಲಾಯಿತು.
ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ಖಾತೆ ಪೋಡಿ, ದರಖಾಸ್ತು ಜಮೀನು, ಜಮೀನುಗಳಿಗೆ ಕಾಲುದಾರಿ, ಮನೆ, ವಿವೇಶನ ಕೊಡಿ, ಶಾಲೆಗೆ ಸೌಲಭ್ಯ ಕಲ್ಪಿಸಿ ಮುಂತಾದ ದೂರುಗಳು ಸಲ್ಲಿಕೆಯಾದವು.

