ಅಸ್ಸಾಂ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್. ರಾಜ್ಯದ ನಾಗಾವ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಪ್ರದ್ಯುತ್ ಬೋರ್ಡೊಲೊಯ್ ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳು, ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಸಂಸದ ಪ್ರದ್ಯುತ್ ಬೋರ್ಡೊಲೊಯ್ ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರವನ್ನು ಕಳಿಸಿದ್ದಾರೆ. ಅಸ್ಸಾಂನ 126 ಸದಸ್ಯ ಬಲದ ವಿಧಾನಸಭೆಗೆ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಈಗಾಗಲೇ ಅಭ್ಯರ್ಥಿಗಳ 2 ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಚುನಾವಣೆ ತಯಾರಿ ನಡೆಸುತ್ತಿದೆ. ಅಸ್ಸಾಂ ರಾಜ್ಯಕ್ಕೆ ಎಐಸಿಸಿ ಚುನಾವಣಾ ಉಸ್ತುವಾರಿ ಡಿ.ಕೆ.ಶಿವಕುಮಾರ್.

ಶಾಕ್ ಮೇಲೆ ಶಾಕ್: ಅಸ್ಸಾಂ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಮೇಲೆ ಶಾಕ್. ಅಸ್ಸಾಂ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಫೆಬ್ರವರಿ 22 ರಂದು ಬಿಜೆಪಿ ಸೇರಿದ್ದರು.
ಈಗ ಸಂಸದ ಪ್ರದ್ಯುತ್ ಬೋರ್ಡೊಲೊಯ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅಸ್ಸಾಂ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆ ಉಂಟಾಗುತ್ತಿದೆ.
ಅಸ್ಸಾಂ ಚುನಾವಣಾ ವೇಳಾಪಟ್ಟಿ
- ಮಾರ್ಚ್ 16ರಂದು ಚುನಾವಣೆ ಅಧಿಸೂಚನೆ ಪ್ರಕಟ
- ಮಾರ್ಚ್ 23 ನಾಮಪತ್ರ ಸಲ್ಲಿಕೆಗೆ ಕೊನೆ ದಿನ
- ಮಾರ್ಚ್ 24 ನಾಮಪತ್ರಗಳ ಪರಿಶೀಲನೆ
- ಮಾರ್ಚ್ 26 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
- ಏಪ್ರಿಲ್ 9ರಂದು ಮತದಾನ
- ಮೇ 4ರಂದು ಮತ ಎಣಿಕೆ
ಸಂಸದ ಪ್ರದ್ಯುತ್ ಬೋರ್ಡೊಲೊಯ್ ರಾಜೀನಾಮೆ ಪತ್ರದಲ್ಲಿ, “ಬಹಳ ದುಃಖದಿಂದ, ಇಂದು ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಎಲ್ಲಾ ಹುದ್ದೆಗಳು, ಸವಲತ್ತುಗಳು ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಉಲ್ಲೇಖಿಸಿದ್ದಾರೆ.
ಪಕ್ಷಕ್ಕೆ ಅವರು ಶುಭಾಶಯಗಳನ್ನು ಕೋರಿದ್ದಾರೆ. ಈ ರಾಜೀನಾಮೆ ಮೂಲಕ ಪ್ರದ್ಯುತ್ ಬೋರ್ಡೊಲೊಯ್ ಮತ್ತು ಕಾಂಗ್ರೆಸ್ ಪಕ್ಷದೊಂದಿಗಿನ ಅವರ ಧೀರ್ಘ ಒಡನಾಟ ಅಂತ್ಯವಾಗಿದೆ.

