ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಸಾಕ್ಷಿಯಾಗಿದ್ದ ಪ್ರದೋಷ್ ಎಸ್. ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ನಗರದ 59ನೇ ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್ ಆದೇಶ ರದ್ದು ಕೋರಿ ನಟ ದರ್ಶನ್ ಸಲ್ಲಿಸಿರುವ ತೀರ್ಪನ್ನು ಸೆಪ್ಟೆಂಬರ್ 7ರಂದು ಪ್ರಕಟಿಸುವುದಾಗಿ ಹೈಕೋರ್ಟ್ ತಿಳಿಸಿದೆ.
ಅಲ್ಲಿಯವರೆಗೆ ವಿಚಾರಣಾ ನ್ಯಾಯಾಲಯ ಪ್ರದೂಷ್ ಸಾಕ್ಷ್ಯವನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆ ಮುಂದೂಡಿದೆ. ಪ್ರಕರಣದ ಎರಡನೇ ಆರೋಪಿಯಾಗಿರುವ ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಬುಧವಾರ ಬೆಳಗ್ಗೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.
ಬುಧವಾರ ಕಲಾಪ ಆರಂಭವಾದ ನಂತರ ಇಂದು ಸಾಕಷ್ಟು ಅರ್ಜಿಗಳ ವಿಚಾರಣೆ ನಿಗದಿಯಾಗಿದೆ. ಇದರಿಂದ ದಿನದ ಕಲಾಪದ ಕೊನೆಯಲ್ಲಿ ಅರ್ಜಿಯ ಕುರಿತ ಆದೇಶದ ಉಕ್ತಲೇಖನ ನೀಡುತ್ತೇನೆ ಎಂದು ದರ್ಶನ್ ಪರ ವಕೀಲರಿಗೆ ನ್ಯಾಯಮೂರ್ತಿಗಳು ತಿಳಿಸಿದ್ದರು. ಕೊನೆಗೆ ಸೆ. 7 ರಂದು ತೀರ್ಪು ಪ್ರಕಟಿಸಲಾಗುವುದು ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.

