ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ದಿನಗಣನೆ ಆರಂಭವಾಗಿದೆ. ಅರಮನೆ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವಕೆ ಸಿದ್ಧತೆಗಳು ಬರದಿಂದ ಸಾಗಿವೆ. ಈ ಬಾರಿಯ ಮೈಸೂರು ದಸರಾದ ಸಾಂಸ್ಕೃತಿಕ ಕಾರ್ಯಕ್ರಮ ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ, ನಟ ಪ್ರಭುದೇವ ಅವರನ್ನು ಆಯ್ಕೆ ಮಾಡಲಾಗಿದೆ.
ಯುವದಸರಾ ಉದ್ಘಾಟಕರಾಗಿ ಪ್ರಭುದೇವ ಅವರಿಗೆ ಮೈಸೂರು ಜಿಲ್ಲಾಡಳಿತ ಹಾಗೂ ಯುವ ದಸರಾ ಸಮಿತಿ ಇಂದು ಅಧಿಕೃತವಾಗಿ ಆಹ್ವಾನ ನೀಡಿದೆ. ಚೆನ್ನೈನ ಪ್ರಭುದೇವ ಅವರ ನಿವಾಸಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಪ್ರಭುದೇವ ಅವರುಗೆ ಮೈಸೂರು ಪೇಟಾ ತೊಡಸಿ, ಶಾಲು-ಹೂವಿನ ಹಾರ ಹಾಕಿ ಗೌರವಪೂರ್ವಕವಾಗಿ ಆಹ್ವಾನ ನೀಡಿದರು.
ಯುವ ದಸರಾ ಉದ್ಘಾಟಕರಾಗಿ ಆಗಮಿಸಲು ಪ್ರಭುದೇವ ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೈಸೂರು ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯುವ ದಸರಾ ಒಂದು ಪ್ರಮುಖ ಆಕರ್ಷಣೆಯಾಗಿದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಕಲಾವಿದರು, ಖ್ಯಾತ ಗಾಯಕರು, ನೃತ್ಯಗಾರರು, ವಿವಿಧ ಕಲಾತಂಡಗಳು ಪಾಲ್ಗೊಂಡು ಯುವಜನತೆಯನ್ನು ರಂಜಿಸುತ್ತಾರೆ.
ದಸರಾ ಮೆರವಣಿಗೆಯಲ್ಲಿ ನಿಶಾನೆಯಾಗಿ ಪಾಲ್ಗೊಳ್ಳಲಿದೆ ಅಭಿಮನ್ಯು
ಇನ್ನು ರಾಜ್ಯ ಸರ್ಕಾರ ಕ್ಯಾಪ್ಟನ್ ಕಿಂಗ್ ಅಭಿಮನ್ಯು ಆನೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. ಈ ಬಾರಿ ದಸರಾದಲ್ಲಿ ಅಭಿಮನ್ಯು ಆನೆ ನಿಶಾನೆಯಾಗಿ ಪಾಲ್ಗೊಳ್ಳಲು ಸರ್ಕಾರ ಆದೇಶ ನೀಡಿದೆ.
ಮೈಸೂರು ದಸರಾ ಮೆರವಣಿಗೆಯಲ್ಲಿ ಅಭಿಮನ್ಯು ಆನೆ ನಿಶಾನೆಯನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಆದೇಶ ಹೊರಡಿಸಿದ್ದಾರೆ.
ಮೈಸೂರು ದಸರಾ ಮಹತ್ಸವದಲ್ಲಿ ಆರು ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ದ ಅಭಿಮನ್ಯು ಆನೆ ಈ ಬಾರಿ ನಿವೃತ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಅಭಿಮನ್ಯು ತಾಯಿ ಚಾಮುಂಡಿ ದೇವಿ ವಿರಾಜಮಾನವಾಗುವ ಚಿನ್ನದ ಅಂಬಾರಿ ಹೊರುವುದಿಲ್ಲ. ಅಂಬಾರಿ ಹೊರಲು ಬೇರೆ ಆನೆ ಆಯ್ಕೆ ಮಾಡಲಾಗುತ್ತಿದೆ. ಅಭಿಮನ್ಯು ದಸರಾದಲ್ಲಿಯೂ ಪಾಲ್ಗೊಳ್ಳುವುದಿಲ್ಲ ಎನ್ನಲಾಗಿತ್ತು. ಆದರೆ ಅಭಿಮನ್ಯು ಆನೆ ಅಭಿಮಾನಿಗಳ ಒತ್ತಾಸೆ ಮೇರೆಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅಭಿಮನ್ಯು ಆನೆಯನ್ನು ದಸರಾ ಮೆರವಣಿಗೆಯಲ್ಲಿ ನಿಶಾನೆಯಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಈ ಬಾರಿಯ ದಸರಾದಲ್ಲಿ ಪಟ್ಟದ ಆನೆ ಮತ್ತು ನಿಶಾನೆ ಆನೆಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮೈಸೂರು ರಾಜಮನೆತನದ ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರು ಪಟ್ಟದ ಆನೆಯಾಗಿ ಶ್ರೀಕಂಠ ಮತ್ತು ನಿಶಾನೆ ಆನೆಯಾಗಿ ಏಕಲವ್ಯ ಆನೆಯನ್ನು ಅಧಿಕೃತವಾಗಿ ಆಯ್ಕೆ ಮಾಡಿದ್ದಾರೆ.
ಶ್ರೀಕಂಠ ಆನೆಯು ಕಳೆದ ಬಾರಿಯೂ ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸಿತ್ತು. ಈ ಬಾರಿಯೂ, ಎರಡನೇ ಬಾರಿಗೆ ಪಟ್ಟದ ಆನೆಯಾಗಿ ಆಯ್ಕೆಯಾಗಿರುವುದು ವಿಶೇಷ. ಭವ್ಯ ನಡಿಗೆ ಮತ್ತು ಗಾಂಭೀರ್ಯದಿಂದ ಶ್ರೀಕಂಠ ಗಮನ ಸೆಳೆಯುತ್ತಿದೆ. ಇದರ ಜೊತೆಗೆ, ಏಕಲವ್ಯ ಆನೆಯು ನಿಶಾನೆ ಆನೆಯಾಗಿ ಶ್ರೀಕಂಠನಿಗೆ ಸಾಥ್ ನೀಡಲಿದೆ. ದಸರಾ ಉತ್ಸವದಲ್ಲಿ ಈ ಆನೆಗಳು ಸಾಂಪ್ರದಾಯಿಕ ಮೆರವಣಿಗೆ ಮತ್ತು ಧಾರ್ಮಿಕ ವಿಧಿಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ

