ಬೆಂಗಳೂರು-ರಾಜ್ಯದಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅನುಷ್ಠಾನಗೊಳ್ಳಲಿರುವ ರೂ12,936.86 ಕೋಟಿ ಅಂದಾಜು ವೆಚ್ಚದ ಏಳು ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ (ಎಸ್‌ಎಲ್‌ಎಸ್‌ಡಬ್ಲ್ಯುಎ) ಸಭೆಯಲ್ಲಿ ಪರಿಶೀಲಿಸಲಾಯಿತು.
ಈ ಯೋಜನೆಗಳು ಪ್ರವಾಸೋದ್ಯಮ, ಆತಿಥ್ಯ, ಜಲಸಾರಿಗೆ, ತೋಟಗಾರಿಕೆ, ಚಲನಚಿತ್ರ ಉದ್ಯಮ ಹಾಗೂ ನಗರ ಸಾರಿಗೆ ಕ್ಷೇತ್ರಗಳನ್ನು ಒಳಗೊಂಡಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿ.ಪಿ.ಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ.
ಅನುಮೋದನೆಯ ಸಾಂಸ್ಥಿಕ ರಚನೆ
ರಾಜ್ಯ ಸರ್ಕಾರದ ಪಿಪಿಪಿ ಸಾಂಸ್ಥಿಕ ವ್ಯವಸ್ಥೆಯಡಿ ರೂ. 500 ಕೋಟಿವರೆಗಿನ ಯೋಜನೆಗಳನ್ನು ಪರಿಶೀಲಿಸಿ ಅನುಮೋದಿಸುವ ಅಧಿಕಾರ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಗಿದೆ (SLSWA). ₹500 ಕೋಟಿಗಿಂತ ಹೆಚ್ಚಿನ ವೆಚ್ಚದ ಯೋಜನೆಗಳನ್ನು SLSWA ಪರಿಶೀಲಿಸಿ, ಗೌರವಾನ್ವಿತ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿರುವ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿಗೆ (SHLCC) ಅಂತಿಮ ಅನುಮೋದನೆಗಾಗಿ ಶಿಫಾರಸು ಮಾಡುತ್ತದೆ.
ನೇರ ಅನುಮೋದನೆ ಪಡೆದ ಯೋಜನೆಗಳು
SLSWA ನಿಂದ ನೇರ ಅನುಮೋದನೆ ಪಡೆದ 4 ಯೋಜನೆಗಳು (ಒಟ್ಟು ವೆಚ್ಚ: ರೂ. 285.43 ಕೋಟಿ)
ಮಂಗಳೂರು ಲೈಟ್ ಹೌಸ್ ಪ್ರವಾಸೋದ್ಯಮ ಮತ್ತು ಆತಿಥ್ಯ ಮೂಲಸೌಕರ್ಯ ಅಭಿವೃದ್ಧಿ: ರೂ. 60.00 ಕೋಟಿ
ಗುರುಪುರ ನದಿ ದ್ವೀಪಗಳ ಅಭಿವೃದ್ಧಿ (ಉತ್ತರ ಭಾಗ): ರೂ. 59.14 ಕೋಟಿ
ಗುರುಪುರ ನದಿ ದ್ವೀಪಗಳ ಅಭಿವೃದ್ಧಿ (ದಕ್ಷಿಣ ಭಾಗ): ರೂ. 66.29 ಕೋಟಿ
ಊಟಿಯ ಫರ್ನ್ ಹಿಲ್‌ನಲ್ಲಿರುವ ‘ಕರ್ನಾಟಕ ಸಿರಿ’ ತೋಟಗಾರಿಕಾ ಉದ್ಯಾನದಲ್ಲಿ ಸಂದರ್ಶಕರ ಸೌಲಭ್ಯಗಳ ಅಭಿವೃದ್ಧಿ: ರೂ. 100.00 ಕೋಟಿ
ಮುಖ್ಯಮಂತ್ರಿಗಳ ಸಮಿತಿಗೆ ಶಿಫಾರಸಾದ ಬೃಹತ್ ಯೋಜನೆಗಳು
ಮುಖ್ಯಮಂತ್ರಿಗಳ ಅಧ್ಯಕ್ಷತೆಯ SHLCC ಸಮಿತಿಗೆ ಶಿಫಾರಸು ಮಾಡಲಾದ 3 ಬೃಹತ್ ಯೋಜನೆಗಳು (ಒಟ್ಟು ವೆಚ್ಚ: ರೂ. 12,651.43 ಕೋಟಿ)
ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣದ ಪುನರ್ ಅಭಿವೃದ್ಧಿ: ರೂ. 4,997.00 ಕೋಟಿ
ಉತ್ತರ ಕನ್ನಡ ಜಿಲ್ಲೆಯ ಮಾಂಕಿ ಬಂದರಿನಲ್ಲಿ ಬಹುಉದ್ದೇಶ ಬಂದರು ಮತ್ತು ಹಡಗು ನಿರ್ಮಾಣ ಘಟಕದ ಅಭಿವೃದ್ಧಿ: ರೂ. 6,925.00 ಕೋಟಿ
ಮೈಸೂರಿನಲ್ಲಿ ಫಿಲ್ಮ್ ಸಿಟಿ ಅಭಿವೃದ್ಧಿ: ರೂ. 729.43 ಕೋಟಿ
*ಯೋಜನೆಯ ನಿರೀಕ್ಷಿತ ಪ್ರಯೋಜನಗಳು ಹಾಗೂ ಸರ್ಕಾರದ ಬದ್ಧತೆ* :
ನಿರೀಕ್ಷಿತ ಪ್ರಯೋಜನಗಳು ಮತ್ತು ಸರ್ಕಾರದ ಬದ್ಧತೆ
ಪ್ರಸ್ತಾವಿತ ಪಿಪಿಪಿ ಯೋಜನೆಗಳು ರಾಜ್ಯದಲ್ಲಿ ಆಧುನಿಕ ಸಾರ್ವಜನಿಕ ಮೂಲಸೌಕರ್ಯ ನಿರ್ಮಾಣ, ಖಾಸಗಿ ವಲಯದ ಹೂಡಿಕೆ ಆಕರ್ಷಣೆ, ಪ್ರವಾಸೋದ್ಯಮ ಮತ್ತು ನಗರ ಸೇವೆಗಳ ಸುಧಾರಣೆಗೆ ನೆರವಾಗಲಿವೆ. ಜೊತೆಗೆ ಕರ್ನಾಟಕದ ಸಾಗರ ಮತ್ತು ಲಾಜಿಸ್ಟಿಕ್ಸ್ ಸಾಮರ್ಥ್ಯವನ್ನು ಬಲಪಡಿಸುವುದಲ್ಲದೆ, ರಾಜ್ಯಾದ್ಯಂತ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ.
ಪಾರದರ್ಶಕ, ಸ್ಪರ್ಧಾತ್ಮಕ ಹಾಗೂ ಫಲಿತಾಂಶ ಆಧಾರಿತ ಯೋಜನಾ ಅನುಷ್ಠಾನದ ಮೂಲಕ ಮೂಲಸೌಕರ್ಯ ಅಭಿವೃದ್ಧಿಯನ್ನು ವೇಗಗೊಳಿಸಿ, ಗುಣಮಟ್ಟದ ಸಾರ್ವಜನಿಕ ಸೇವೆಗಳನ್ನು ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

