HomeKarnatakaಗಣೇಶ ಹಬ್ಬದಲ್ಲಿ ಡಿಜೆ ಸೌಂಡ್ ಸಿಸ್ಟಮ್ ಬಳಸಿದರೆ 1 ಲಕ್ಷ ರೂ. ದಂಡ: ಪಿಒಪಿ ಗಣೇಶ...

ಗಣೇಶ ಹಬ್ಬದಲ್ಲಿ ಡಿಜೆ ಸೌಂಡ್ ಸಿಸ್ಟಮ್ ಬಳಸಿದರೆ 1 ಲಕ್ಷ ರೂ. ದಂಡ: ಪಿಒಪಿ ಗಣೇಶ ವಿಗ್ರಹ ಬಳಕೆ ಸಂಪೂರ್ಣ ನಿಷೇಧ

ಧಾರವಾಡ: ಜಿಲ್ಲೆಯಲ್ಲಿ ಪಿಒಪಿ ಗಣೇಶ ವಿಗ್ರಹಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಮಿತಿ ಮೀರಿದ ಸೌಂಡ್ ಸಿಸ್ಟಮ್(ಡಿಜೆ) ಕಂಡುಬಂದಲ್ಲಿ ಅಧಿಕಾರಿಗಳು ಜಪ್ತಿ ಮಾಡಿ, 1 ಲಕ್ಷ ರೂ.ವರೆಗೂ ದಂಡ ವಿಧಿಸಲು ಜಿಲ್ಲಾಧಿಕಾರಿ ಸ್ನೇಹಲ್ ಆರ್., ಅವರು ಸೂಚಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಗುಣಗಳುಳ್ಳ ಗಣೇಶ ವಿಗ್ರಹಗಳ ತಯಾರಿಕೆ, ಮಾರಾಟ ಮತ್ತು ವಿಸರ್ಜನೆಯನ್ನು ನಿಷೇಧಿಸುವ ಬಗ್ಗೆ ಹಾಗೂ ಹಸಿರು ಪಟಾಕಿಗಳ ಬಳಕೆ ಕುರಿತು ಅನುಸರಿಸಬೇಕಾದ ಮುಂಜಾಗೃತ ಕ್ರಮಗಳ ಕುರಿತು ಸಭೆ ಜರುಗಿಸಿ, ಮಾತನಾಡಿದರು.

ಗೌರಿಗಣೇಶ ಹಬ್ಬಕ್ಕೆ ಡಿಜೆ ಸೌಂಡ್ ಸಿಸ್ಟಮ್ ನಿಷೇಧಿಸಲಾಗಿದ್ದು, ಡಿ.ಜೆ. ಸೌಂಡ್ ಸಿಸ್ಟಮ್ ಹಚ್ಚುವುದರಿಂದ ಗ್ರಾಮ ಹಾಗೂ ನಗರಗಳಲ್ಲಿಯ ವೃದ್ದರಿಗೆ, ಚಿಕ್ಕ ಮಕ್ಕಳಿಗೆ, ಗರ್ಭೀಣಿಯರಿಗೆ ತೊಂದರೆಯಾಗುತ್ತಿದ್ದು, ಡಿಜೆ ಹಾಕುವ ಬದಲಾಗಿ ಡೊಳ್ಳು ಕುಣಿತ, ಹೆಜ್ಜೆ ಮೇಳ, ಕರಡಿ ಮಜಲು ಅಂತಹ ಸಾಂಪ್ರದಾಯಿಕ ಜನಪದ ಕಲೆಗಳನ್ನು ಮಾಡಿಸಿ, ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ವಿಗ್ರಹಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಇದು ಕಾನೂನುಬಾಹಿರ. ಅಧಿಕಾರಿಗಳು ನಗರಾದ್ಯಂತ ದಿಢೀರ ದಾಳಿ ನಡೆಸಿ, ಅಂತಹ ವಿಗ್ರಹಗಳು ಸಿಕ್ಕರೆ, ತಕ್ಷಣ ವಶಪಡಿಸಿಕೊಳ್ಳಬೇಕು. ಮತ್ತು ಮಾರಾಟಗಾರರ ಮೇಲೆ ದಂಡ ವಿಧಿಸಬೇಕು. ಗಣಪತಿ ವಿಗ್ರಹ ಮಾರಾಟಗಾರರು ಪರಿಸರಸ್ನೇಹಿ ಮಣ್ಣಿನ ಗಣಪತಿಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ಅವರು ಹೇಳಿದರು.

ಹಬ್ಬ ಆಚರಿಸುವುದು ನಮ್ಮ ಸಂಸ್ಕೃತಿಯ ಹೆಮ್ಮೆ. ಆದರೆ, ಅದು ಪರಿಸರ ಸ್ನೇಹಿ ಆಗಿರಬೇಕು. ಮಣ್ಣಿನ ನೈಸರ್ಗಿಕ ಬಣ್ಣಗಳಿಂದ ಮಾಡಿದ, ಸುಲಭವಾಗಿ ನೀರಿನಲ್ಲಿ ಕರಗುವ ಗಣೇಶನ ವಿಗ್ರಹಗಳನ್ನೇ ಪೂಜಿಸಿ. ಈಗಾಗಲೇ ಅನೇಕರು ಪರಿಸರ ಸ್ನೇಹಿ ಗಣೇಶನಿಗೆ ಆದ್ಯತೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ವಿಷಯವಾಗಿದೆ. ನಮ್ಮ ಹಬ್ಬ, ನಮ್ಮ ಪರಿಸರ, ನಮ್ಮ ಜವಾಬ್ದಾರಿ. ಜಿಲ್ಲಾಡಳಿತದ ಈ ಕಾರ್ಯವು ಸಾರ್ವಜನಿಕರ ಸಹಕಾರವಿಲ್ಲದೆ ಸಂಪೂರ್ಣ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾಡಳಿತವು ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅನಿರೀಕ್ಷಿತ ಭೇಟಿ ಮೂಲಕ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿ, ಪಿಒಪಿ ವಿಗ್ರಹಗಳನ್ನು ತಡೆಗಟ್ಟಲು ಕ್ರಮವಹಿಸಿವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪಿಒಪಿ ಗಣಪತಿ ವಿಗ್ರಹಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ, ಪರಿಸರ ಇಲಾಖೆ, ಕಂದಾಯ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿಯ ಅಧಿಕಾರಿಗಳು ನಿರಂತರ ತಪಾಸಣೆ, ಪರಿಶೀಲನೆ ಕೈಗೊಳ್ಳಬೇಕು ಎಂದು ಸೂಚಿಸಿದರು. 

ಸಾರ್ವಜನಿಕರು ಮಣ್ಣಿನ ಗಣಪತಿಯನ್ನು ಪೂಜಿಸುವ ಮೂಲಕ ಪರಿಸರ ಸ್ನೇಹಿ ಗಣೇಶ ಚತುರ್ಥಿಯನ್ನು ಆಚರಿಸಬೇಕು. ನೆಲ, ಜಲ, ವಾಯು ಸೇರಿದಂತೆ ನಮ್ಮ ಪರಿಸರವನ್ನು ಕಾಪಾಡಬೇಕೆಂದು ಮತ್ತು ಜಿಲ್ಲಾಡಳಿತ, ಮಹಾನಗರ ಪಾಲಿಕೆಯು ನೀಡುವ ನಿರ್ದೇಶನಗಳನ್ನು ಪಾಲಿಸಬೇಕೆಂದು ಅವರು ಹೇಳಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾಲಕ್ಕೆ ಮೆರವಣಿಗೆಯ ಮಾರ್ಗವನ್ನು ಮುಂಚಿತವಾಗಿ ಪೊಲೀಸ್ ಠಾಣೆಗೆ ತಿಳಿಸುವುದು ಮತ್ತು ಮಾರ್ಗ ಬದಲಾವಣೆ ಮಾಡುವುದು ಇದ್ದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾಲಕ್ಕೆ ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ಅಡೆತಡೆ ಆಗದಂತೆ ನೋಡಿಕೊಳ್ಳುವುದು. ಗಣೇಶ ಹಬ್ಬದ ಆಚರಣೆ ಹಸಿರು ಪಾಟಾಕಿಗಳನ್ನು ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಳಕೆ ಮಾಡಬೇಕು. ನಮ್ಮ ಶ್ರದ್ಧೆ ಪರಿಸರಕ್ಕೆ ಮಾರಕವಾಗಬಾರದು. ನಮ್ಮ ಪೂಜೆ ಮುಂದಿನ ಪೀಳಿಗೆಗೆ ಶಾಪವಾಗಬಾರದು. ಆಚರಣೆಗಳ ಪರಿಣಾಮದಿಂದಾಗಿ ಆರೋಗ್ಯವನ್ನು ಹಾಳಾಗದಂತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ತಿಳಿಸಿದರು.

ಬೇರೆ ಜಿಲ್ಲೆಗಳಿಂದ ನಮ್ಮ ನಗರ ಮತ್ತು ಪಟ್ಟಣಕ್ಕೆ ಪಿಒಪಿ ವಿಗ್ರಹಗಳು ಬರದಂತೆ ತಡೆಯಲು ಜಿಲ್ಲೆಯ ಗಡಿ ಭಾಗಗಳಲ್ಲಿ ಹಾಗೂ ಮಹಾನಗರದ ಗಡಿಯಲ್ಲಿ ಚೆಕ್‍ ಪೋಸ್ಟ್‍ಗಳನ್ನು ಸ್ಥಾಪಿಸಿ, ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು. ಚೆಕ್ ಪೋಸ್ಟ್‍ ನಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ನಿಯಮ ಉಲ್ಲಂಘಿಸಿ ಸಾಗಾಟ ಮಾಡುವ ವಾಹನಗಳನ್ನು ಮತ್ತು ಪಿಒಪಿ ವಿಗ್ರಹಗಳನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಾಂಪ್ರದಾಯಿಕವಾಗಿ ತಯಾರಿಸುವ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾಡಿ, ಪೂಜಿಸಿ ಮತ್ತು ಮೂರ್ತಿ ವಿಸರ್ಜನೆಯನ್ನು ಮನೆಯಲ್ಲಿ ಒಂದು ಬಕೆಟ್ ನೀರಿನಲ್ಲಿ ಮಾಡುವ ಬಗ್ಗೆ ಹಾಗೂ ಆ ಮಣ್ಣಿನಿಂದ ಗಿಡಗಳನ್ನು, ಸಸಿಗಳನ್ನು ಬೆಳೆಸುವುದರ ಕುರಿತು ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರು ಮಾತನಾಡಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಮಣ್ಣಿನ ಗಣಪತಿ ಮೂರ್ತಿ ತಯಾರಕರಿಗೆ ರೂ.25,000 ಪ್ರೋತ್ಸಾಹ ಧನ ಹಾಗೂ ಧೀಮಂತ ಸನ್ಮಾನ ಮಾಡಲಾಗುವುದು. ಹಾಗೂ ಮನೆಗಳಲ್ಲಿ ಮಣ್ಣಿನ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಸಾರ್ವಜನಿಕರು ಗಣಪತಿಯ ಫೋಟೊಗಳನ್ನು ಹು-ಧಾ ಮಹಾನಗರ ಪಾಲಿಕೆಗೆ ಸಲ್ಲಿಸಿದ್ದಲ್ಲಿ, ಇಲಾಖೆಯಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು ಎಂದು ಅವರು ಹೇಳಿದರು.

ಗಣಪತಿ ವಿಗ್ರಹಗಳನ್ನು ಪಾಲಿಕೆಯು ನಿಯೋಜಿಸಿದ ಸಾರ್ವಜನಿಕ ನೀರಿನ ತೊಟ್ಟಿ (ಕಮರ್ಷಿಯಲ್ ವಾಟರ್ ಟ್ಯಾಂಕ್) ಯಲ್ಲಿ ಕಡ್ಡಾಯವಾಗಿ ವಿಸರ್ಜಿಸಬೇಕು. ಗಣೇಶ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಚಲನಚಿತ್ರ ಹಾಡುಗಳನ್ನು ಹಾಕದೇ, ದೇವರ ನಾಮಾವಳಿಗಳನ್ನು ಹಾಕಬೇಕು. ಲೇಸರ್ ಲೈಟ್ ಬಳಸಬಾರದು ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಶೋಭಾ ಅವರು ಇದ್ದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ಸೇರಿದಂತೆ ಗಣೇಶ ಮೂರ್ತಿ ತಯಾರಕರು ಹಾಗೂ ಗಣೇಶ ಮೂರ್ತಿ ಮಾರಾಟಗಾರರು, ಪಟಾಕಿ ಮಾರಾಟಗಾರರು ಹಾಗೂ ವಿವಿಧ ಇಲಾಖೆಯ  ಅಧಿಕಾರಿಗಳು ಭಾಗವಹಿಸಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular