ದಂಪತಿಗಳು ಅಥವಾ ಕುಟುಂಬದ ಸದಸ್ಯರು ದಿನಕ್ಕೆ ಕನಿಷ್ಠ ಒಂದು ಬಾರಿಯಾದರೂ ಒಟ್ಟಿಗೆ ಕುಳಿತು ಊಟ ಮಾಡಬೇಕು ಎಂಬುದು ಅನಾದಿ ಕಾಲದಿಂದಲೂ ಬೆಳೆದು ಬಂದಿರುವ ಪದ್ಧತಿ. ಆದರೆ, ಬದಲಾಗುತ್ತಿರುವ ಜೀವನಶೈಲಿ ಹಾಗೂ ಆಧುನಿಕ ದಾಂಪತ್ಯದಲ್ಲಿ ಫುಡ್ ಡೈವೋರ್ಸ್ (Food Divorce) ಎಂಬ ಹೊಸ ಟ್ರೆಂಡ್ ಸದ್ದು ಮಾಡುತ್ತಿದೆ
ಈ ಹೆಸರು ಕೇಳಿದ ತಕ್ಷಣ ಗಂಡ-ಹೆಂಡತಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಬದಲಿಗೆ, ಪ್ರತಿದಿನದ ಅಡುಗೆ, ಊಟದ ಸಮಯ ಹಾಗೂ ಆಹಾರದ ಆಯ್ಕೆಯ ವಿಚಾರದಲ್ಲಿ ಪರಸ್ಪರರಿಗೆ ನೀಡುವ ಸ್ವಾತಂತ್ರ್ಯವೇ ಈ ಫುಡ್ ಡೈವೋರ್ಸ್
ಪ್ರತಿದಿನ ‘ಇಂದು ಏನು ತಿನ್ನೋಣ?’ ಎಂಬ ಪ್ರಶ್ನೆಯೇ ತಲೆನೋವೇ?
ಬಹುತೇಕ ಮನೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಎದುರಾಗುವ ಸಾಮಾನ್ಯ ಪ್ರಶ್ನೆ “ಇವತ್ತು ರಾತ್ರಿಗೆ ಏನು ಅಡುಗೆ ಮಾಡುವುದು?” ಅಥವಾ “ಏನು ತಿನ್ನೋಣ?”. ಅದಕ್ಕೆ “ನನಗೆ ಗೊತ್ತಿಲ್ಲ, ನೀನೇ ಹೇಳು” ಎಂಬ ಉತ್ತರ ಬಂದು, ನಂತರ ಪಾಸ್ತಾ ಬೇಕೋ, ಅನ್ನ-ಸಾಂಬಾರ್ ಬೇಕೋ ಅಥವಾ ಹೊರಗಿನಿಂದ ಆರ್ಡರ್ ಮಾಡಬೇಕೋ ಎಂಬ ಚರ್ಚೆ ದೊಡ್ಡ ಜಗಳಕ್ಕೆ ಕಾರಣವಾಗುವುದುಂಟು.
ಒಬ್ಬರಿಗೆ ರೊಟ್ಟಿ-ಪಲ್ಯ ಬೇಕಿದ್ದರೆ, ಇನ್ನೊಬ್ಬರಿಗೆ ಹಗುರವಾದ ಸಲಾಡ್ ತಿನ್ನಬೇಕು ಎನ್ನಿಸಬಹುದು. ಪ್ರತಿದಿನ ಯಾರೋ ಒಬ್ಬರು ತಮ್ಮ ಇಷ್ಟವನ್ನು ಬಿಟ್ಟುಕೊಟ್ಟು ಮತ್ತೊಬ್ಬರಿಗಾಗಿ ಹೊಂದಾಣಿಕೆ ಮಾಡಿಕೊಳ್ಳುವುದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಈ ದೈನಂದಿನ ಕಿರಿಕಿರಿಯಿಂದ ಹೊರಬರಲು ದಂಪತಿಗಳು ಫುಡ್ ಡೈವೋರ್ಸ್ ಹಾದಿ ಹಿಡಿಯುತ್ತಿದ್ದಾರೆ.
ಏನಿದು ಫುಡ್ ಡೈವೋರ್ಸ್ ಪದ್ಧತಿ?
ಆಹಾರದ ವಿಚಾರದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಆದ್ಯತೆಗಳಿರುತ್ತವೆ ಎಂಬುದನ್ನು ಒಪ್ಪಿಕೊಳ್ಳುವುದೇ ಇದರ ಮೂಲ ಉದ್ದೇಶ. ಇದರಲ್ಲಿ:
ಸ್ವತಂತ್ರ ಆಯ್ಕೆ: ಇಬ್ಬರೂ ಒಂದೇ ಆಹಾರಕ್ಕೆ ಒಪ್ಪಿಕೊಳ್ಳಲೇಬೇಕೆಂಬ ನಿಯಮವಿಲ್ಲ. ಒಬ್ಬರು ತಮ್ಮ ಇಷ್ಟದ ಆಹಾರ ಸಿದ್ಧಪಡಿಸಿಕೊಂಡು ಅಥವಾ ತರಿಸಿ ತಿನ್ನಬಹುದು, ಮತ್ತೊಬ್ಬರು ತಮ್ಮ ಆಯ್ಕೆಯನ್ನು ಅನುಸರಿಸಬಹುದು.
ಸಮಯದ ಕಟ್ಟುಪಾಡಿಲ್ಲ: ಇಬ್ಬರೂ ಒಂದೇ ಸಮಯದಲ್ಲಿ ಊಟ ಮಾಡಬೇಕು ಎಂಬ ಒತ್ತಡವಿರುವುದಿಲ್ಲ.
ಜವಾಬ್ದಾರಿಯ ಹಂಚಿಕೆ: ದಿನನಿತ್ಯ ಏನು ಅಡುಗೆ ಮಾಡಬೇಕು, ರೇಷನ್ ತರಬೇಕು ಎಂಬ ‘ಅಗೋಚರ ಒತ್ತಡ’ವನ್ನು ಒಬ್ಬರ ಮೇಲೆಯೇ ಹಾಕಿ ಸತಾಯಿಸುವುದನ್ನು ತಪ್ಪಿಸಲಾಗುತ್ತದೆ.
ಅಡುಗೆ ಮನೆಯ ಅಗೋಚರ ಒತ್ತಡಕ್ಕೆ ಮುಕ್ತಿ
ಅಡುಗೆ ಮಾಡುವುದೆಂದರೆ ಕೇವಲ ಒಲೆಯ ಮುಂದೆ ನಿಲ್ಲುವುದಷ್ಟೇ ಅಲ್ಲ. ದಿನವೂ ಮೆನು ಯೋಜಿಸುವುದು (Meal planning), ಸಾಮಗ್ರಿ ತರುವುದು ಹಾಗೂ ಅಡುಗೆ ನಂತರ ಶುಚಿಗೊಳಿಸುವುದು ಇವೆಲ್ಲವೂ ಒಬ್ಬರ ಮೇಲೆಯೇ ಬಿದ್ದಾಗ ಅದು ದೈಹಿಕ ಹಾಗೂ ಮಾನಸಿಕ ಆಯಾಸ ಉಂಟುಮಾಡುತ್ತದೆ. ವಾರದ ಕೆಲ ದಿನಗಳು ಪ್ರತಿಯೊಬ್ಬರೂ ತಮ್ಮ ಆಹಾರವನ್ನು ತಾವೇ ನೋಡಿಕೊಳ್ಳುವುದರಿಂದ, ಮನೆಯಲ್ಲಿ ನಿರಂತರ ಅಡುಗೆ ಮಾಡುವ ವ್ಯಕ್ತಿಗೆ ದೊಡ್ಡ ಮಟ್ಟದ ನೆಮ್ಮದಿ ಸಿಗುತ್ತದೆ.
ಬೇರೆಬೇರೆ ಊಟ ಮಾಡಿದರೆ ಸಂಬಂಧ ಹಾಳಾಗುತ್ತದೆಯೇ?
ದಂಪತಿಗಳು ಪ್ರತಿಯೊಂದು ಕೆಲಸವನ್ನೂ ಒಟ್ಟಿಗೆ ಮಾಡಲೇಬೇಕು ಎಂಬ ಕಡ್ಡಾಯ ನಿಯಮವೇನೂ ಇಲ್ಲ. ಕೆಲವರ ಕೆಲಸದ ಸಮಯ, ಮಲಗುವ ಸಮಯ ಹಾಗೂ ಹವ್ಯಾಸಗಳು ಬೇರೆಬೇರೆ ಇರುವಂತೆ, ಆಹಾರದ ಆಯ್ಕೆಯೂ ವಿಭಿನ್ನವಾಗಿರಬಹುದು.
ಫುಡ್ ಡೈವೋರ್ಸ್ ಎಂದರೆ ಎಂದಿಗೂ ಒಟ್ಟಿಗೆ ಊಟ ಮಾಡಬಾರದು ಎಂದರ್ಥವಲ್ಲ. ವಾರಾಂತ್ಯಗಳಲ್ಲಿ (Weekend) ಒಟ್ಟಿಗೆ ಊಟ ಮಾಡಬಹುದು, ಹೊರಗೆ ಹೋಗಿ ಡಿನ್ನರ್ ಮಾಡಬಹುದು. ಕೇವಲ ಬೇರೆಬೇರೆ ಊಟ ಮಾಡುತ್ತಾರೆ ಎಂಬ ಕಾರಣಕ್ಕೆ ಸಂಬಂಧದಲ್ಲಿ ಸಮಸ್ಯೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಬದಲಿಗೆ, ದಿನನಿತ್ಯದ ಕಿರಿಕಿರಿ ತಪ್ಪಿ ದಾಂಪತ್ಯದಲ್ಲಿ ನೆಮ್ಮದಿ ಹಾಗೂ ಪ್ರೀತಿ ಹೆಚ್ಚಾಗುತ್ತದೆ ಎಂಬುದೇ ಈ ಹೊಸ ಟ್ರೆಂಡ್‌ನ ಅಸಲಿ ಸತ್ಯ

