ಪ್ರಿಯಕರನಿಗೆ ದುಬಾರಿ ಬೈಕ್ ಕೊಡಿಸಿ ಆತನನ್ನು ಖುಷಿಪಡಿಸಲು ಹೋಗಿ, ತಂದೆಯ ಸ್ನೇಹಿತನ ಮನೆಯಲ್ಲೇ ಚಿನ್ನಾಭರಣ ಕದ್ದು ಯುವತಿಯೊಬ್ಬಳು ಜೈಲು ಪಾಲಾಗಿರುವ ಘಟನೆ ತಮಿಳುನಾಡಿನ ಪೊಳ್ಳಾಚಿಯಲ್ಲಿ ನಡೆದಿದೆ. ಬೈಕ್ ಖರೀದಿಸಿದ ಸಂಭ್ರಮದಲ್ಲಿ ಷೋರೂಂನಲ್ಲಿ ಮಾಡಿದ್ದ ರೀಲ್ಸ್ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಪೊಳ್ಳಾಚಿಯ ಸರ್ಕಾರಿ ಕಲಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಮ್ ಓದುತ್ತಿರುವ 19 ವರ್ಷದ ಜಾಯ್ ಪ್ರಿನ್ಸಿ ಬಂದಿತ ವಿದ್ಯಾರ್ಥಿನಿ. ಪೊಳ್ಳಾಚಿ ಬಳಿಯ ಉಂಜವೇಲಂಪಟ್ಟಿ ನಿವಾಸಿ ಹಾಗೂ ಯುವತಿಯ ತಂದೆಯ ಸ್ನೇಹಿತರಾದ ತಮಿಳುಸೆಲ್ವನ್ ಎಂಬುವವರ ದೂರಿನ ಆಧಾರದ ಮೇಲೆ ಪೊಳ್ಳಾಚಿ ಈಸ್ಟ್ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಆಗಸ್ಟ್ 16 ರಂದು ಜಾಯ್ ಪ್ರಿನ್ಸಿ ತನ್ನ ಸ್ನೇಹಿತೆಯಾಗಿದ್ದ ತಮಿಳುಸೆಲ್ವನ್ ಅವರ ಮಗಳನ್ನು ಭೇಟಿಯಾಗಲು ಅವರ ಮನೆಗೆ ಹೋಗಿದ್ದಳು. ಈ ವೇಳೆ ಯಾರಿಗೂ ತಿಳಿಯದಂತೆ ಬೀರು ತೆರೆದು ಸುಮಾರು 9 ಸವರನ್ ತೂಕದ ಚಿನ್ನಾಭರಣಗಳನ್ನು ಕದ್ದುಕೊಂಡು ಪರಾರಿಯಾಗಿದ್ದಳು. ಬಳಿಕ ಮನೆಯಲ್ಲಿ ಚಿನ್ನಾಭರಣ ಕಾಣೆಯಾಗಿರುವುದು ಕಂಡುಬಂದಾಗ ತಮಿಳುಸೆಲ್ವನ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಜಾಯ್ ಪ್ರಿನ್ಸಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಕದ್ದ ಚಿನ್ನಾಭರಣಗಳನ್ನು ಪೊಳ್ಳಾಚಿಯ ಸ್ಥಳೀಯ ಜ್ಯುವೆಲ್ಲರಿ ಶೋರೂಂ ಒಂದರಲ್ಲಿ ಸುಮಾರು 2.5 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಈ ಹಣದಿಂದ ಮಕ್ಕಿನಂಪಟ್ಟಿ ನಿವಾಸಿಯಾದ ತನ್ನ ಪ್ರಿಯಕರ ಜನಗನ್ ಶಿವ ಎಂಬುವವನಿಗೆ ಹೊಸ ದ್ವಿಚಕ್ರ ವಾಹನ ಖರೀದಿಸಿ ನೀಡಿದ್ದಳು.
ಬೈಕ್ ಖರೀದಿಸಿದ ನಂತರ ಇಬ್ಬರೂ ಷೋರೂಂನಲ್ಲಿ ಸಂಭ್ರಮಿಸಿ ಫೋಟೋ ಹಾಗೂ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಪೊಲೀಸರ ತನಿಖೆಗೆ ದೊಡ್ಡ ಸಾಕ್ಷಿಯಾಗಿ ಸಿಕ್ಕಿಬಿದ್ದಿದೆ. ಸದ್ಯ ಯುವತಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೊಯಂಬತ್ತೂರು ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ಇತ್ತ ಘಟನೆ ಬಳಿಕ ತಲೆಮರೆಸಿಕೊಂಡಿರುವ ಪ್ರಿಯಕರ ಜನಗನ್ ಶಿವನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
“>
“>

