ವಿಜಯಪುರ: ರಾಜ್ಯಾದ್ಯಂತ ಇಂದು ಪೊಲೀಸ್ ಕಾನ್ಸ್ ಬಲ್ ಹುದ್ದೆ ನೇಮಕಾತಿ ಪರೀಕ್ಷೆ ನಡೆಯುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಪರೀಕ್ಷೆ ವೇಳೆ ಸಾಕಷ್ಟು ಗೊಂದಲವುಂಟಾಗಿದ್ದು, ಅಭ್ಯರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ವಿಜಯಪುರದ ತಿಕೋಟಾದಲ್ಲಿ ಶಾರದಾಂಬಾ ಪಿಯು ಕಾಲೇಜಿನಲ್ಲಿ ಕಾನ್ಸ್ ಟೇಬಲ್ ಹುದ್ದೆ ನೇಮಕಾತಿ ಪರೀಕ್ಷೆ ವೇಳೆ ಸಮಯವಾದರೂ ಪ್ರಶ್ನೆ ಪತ್ರಿಕೆ ನೀಡದೇ ತಡ ಮಾಡಿದ್ದಾರೆ. ಬಳಿಕ ಪ್ರಶ್ನೆ ಪತ್ರಿಕೆ ಕೊಟ್ಟು ಅರ್ಧಗಂಟೆ ಕಳೆದರೂ OMR ಶೀಟ್ ಕೊಡದೇ ವಿಳಂಬ ಮಾಡಿದ್ದಾರೆ.
ಅಲ್ಲದೇ OMR ಶೀಟ್ ಅನುಕ್ರಮ ಸಂಖ್ಯೆಗೂ ಪ್ರಶ್ನೆ ಪತ್ರಿಕೆಯಲ್ಲಿನ ಅನುಕ್ರಮ ಸಂಖ್ಯೆಗೂ ಮಿಸ್ ಮ್ಯಾಚ್ ಆಗಿದೆ. ಒಂದಕ್ಕೊಂದು ಹೊಂದಾಣಿಕೆಯಾಗುತ್ತಿರಲಿಲ್ಲ. ಈ ಬಗ್ಗೆ ಅಭ್ಯರ್ಥಿಗಳು ಪ್ರಶ್ನಿಸಿದರೆ ಪರೀಕ್ಷಾ ಮೇಲ್ವಿಚಾರಕರು ಸಮರ್ಪಕ ಉತ್ತರ ನೀಡಿಲ್ಲ. ಇದೆಲ್ಲದರಿಂದ ಸಿಡಿದೆದ್ದ ಅಭ್ಯರ್ಥಿಗಳು ಪರೀಕ್ಷೆ ಬಹಿಷ್ಕರಿಸಿ , ಪರೀಕ್ಷಾ ಕೇಂದ್ರದಿಂದ ಹೊರ ಬಂದು ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಈ ರೀತಿ ಪರೀಕ್ಷಾ ಗೊಂದಲ, ಸಮಸ್ಯೆಯಿಂದಾಗಿ ಅಭ್ಯರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ನಮ್ಮ ಸಂಕಷ್ಟ ಕೇಳುವವರೇ ಇಲ್ಲದಾಗಿದ್ದಾರೆ ಎಂದು ಅಭ್ಯರ್ಥಿಗಳು ಕಣ್ಣೀರಿಟ್ಟಿದ್ದಾರೆ. ಕಾನ್ಸ್ ಟೇಬಲ್ ಹುದ್ದೆ ಪರೀಕ್ಷಾ ಗೊಂದಲ ಸರಿಪಡಿಸಿ, ನಮಗೆ ಮರು ಪರೀಕ್ಷೆಗೆ ಅವಕಾಶ ನೀಡುವಂತೆ ಅಭ್ಯರ್ಥಿಗಳು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಘಟನಾ ಸ್ಥಳಕ್ಕೆ ಎಸ್ ಪಿ ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದಾರೆ.
ಇದೇ ವೇಳೆ ಹಾಸನ ಜಿಲ್ಲೆಯಲ್ಲಿಯೂ ಪರೀಕ್ಷೆ ವೇಳೆ ಗೊಂದಲವುಂಟಾಗಿದೆ. ಪ್ರಶ್ನೆ ಪತ್ರಿಕೆ ಹಾಗೂ OMR ಶೀಟ್ ಸಂಖ್ಯೆ ಮಿಸ್ ಮ್ಯಾಚ್ ಆಗಿದ್ದರಿಂದ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಜಿಲ್ಲಾದಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಲು ಯತ್ನಿಸಿದ ಘಟನೆ ನಡೆದಿದೆ.

