ದಾವಣಗೆರೆ: ಬಾಲಕನ ಮೇಲಿನ ದೌರ್ಜನ್ಯ ಆರೋಪದಲ್ಲಿ ದಾಖಲಾಗಿದ್ದ ಪೋಕ್ಸೋ ಕೇಸ್ ಗೆ ಸಂಬಮ್ಧಿಸಿದಂತೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳಿಗೆ ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಕೆಲವು ಷರತ್ತು ವಿಧಿಸಿ ನ್ಯಾ. ಶ್ರೀರಾಮ ನಾರಾಯಣ ಹೆಗಡೆ ವಚನಾನಂದ ಶ್ರೀಗಳಿಗೆ ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ. ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ರದ್ದು ಮಾಡಿ ರೆಗ್ಯುಲರ್ ಬೇಲ್ ಪಡೆಯುವಂತೆ ಜೂ.25ರಂದು ಸ್ವಾಮೀಜಿಗೆ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆ ಜೂನ್ 27ರಂದು ಜಿಲ್ಲಾ ವಿಶೇಷ ಪೋಕ್ಸೋ ಕೋರ್ಟ್ಗೆ ವಚನಾನಂದ ಶ್ರೀ ಅರ್ಜಿ ಸಲ್ಲಿಸಿದ್ದರು. ಎರಡು ಕಡೆಯವರ ವಾದವನ್ನು ಈಗಾಗಲೇ ಆಲಿಸಿದ್ದ ನ್ಯಾಯಾಲಯ ಸ್ವಾಮೀಜಿಗೆ ರೆಗ್ಯುಲರ್ ಬೇಲ್ ನೀಡಿದೆ.
ಈಗಾಗಲೇ ವಚನಾನಂದ ಶ್ರೀ ವಿರುದ್ಧ 7 ಮಕ್ಕಳ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದ್ದು, ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಬಗ್ಗೆ ಹಾಗೂ ದೌರ್ಜನ್ಯ ನಡೆಸಿರುವ ಆರೋಪ ಸ್ವಾಮೀಜಿ ಮೇಲಿದೆ. ಸಂತ್ರಸ್ತರ ಪರ ವಕೀಲ ರಮೇಶ್ ಕಲಾಲ್ ಮತ್ತು ವಚನಾನಂದಶ್ರೀ ಪರ ವಕೀಲ ಎಸ್.ವಿ.ಪಾಟೀಲ್ ವಾದ ಮಂಡನೆ ಮಾಡಿದ್ದರು. ಆ ಬಳಿಕ ವಚನಾನಂದಶ್ರೀಗೆ ಜಾಮೀನು ಸಂಬಂಧ ಅಂತಿಮ ತೀರ್ಪನ್ನು ಇಂದಿಗೆ ಕಾಯ್ದಿರಿಸಿರೋದಾಗಿ ಜುಲೈ 6ರಂದು ವಿಶೇಷ ಪೋಕ್ಸೋ ಕೋರ್ಟ್ ಹೇಳಿತ್ತು.
ಪೋಕ್ಸೋ ಪ್ರಕರಣಕ್ಕೆ ನಿರೀಕ್ಷಣಾ ಜಾಮೀನು ಪಡೆದಿದ್ದ ವಚನಾನಂದ ಸ್ವಾಮೀಜಿಗೆ ಹೈಕೋರ್ಟ್ ಈ ಹಿಂದೆ ಶಾಕ್ ಕೊಟ್ಟಿತ್ತು. ಪ್ರಕರಣ ದಾಖಲಾಗುವ ಮುನ್ನವೇ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದಿದ್ದನ್ನು ಪ್ರಶ್ನಿಸಿ ಬಾಲಕನ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕೇಸ್ ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ನೀಡಿದ್ದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ ಶ್ರೀಗಳ ನಿರೀಕ್ಷಣಾ ಜಾಮೀನು ರದ್ದುಪಡಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿತ್ತು. ಹೀಗಿದ್ದರೂ ರೆಗ್ಯುಲರ್ ಬೇಲ್ಗೆ ಅರ್ಜಿ ಸಲ್ಲಿಸಲು ಸ್ವಾಮೀಜಿಗೆ 3 ವಾರಗಳ ಕಾಲಾವಕಾಶ ನೀಡಿ, ಅಲ್ಲಿಯವರೆಗೂ ನಿರೀಕ್ಷಣಾ ಜಾಮೀನಿನ ರಕ್ಷಣೆ ಮುಂದುವರಿಕೆಗೆ ಕೋರ್ಟ್ ಸೂಚಿಸಿತ್ತು.

