ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯಡಿ ಪ್ರೋತ್ಸಾಹಧನ ಪಡೆಯುತ್ತಿರುವ ಅರ್ಹ ರೈತರು ಪ್ರತಿ ವರ್ಷ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ 01-02-2019 ರ ಪೂರ್ವದಲ್ಲಿ ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ರೈತ ಕುಟುಂಬಕ್ಕೆ ವರ್ಷಕ್ಕೆ ಒಟ್ಟು ರೂ. 6,000 ರೂ.ಗಳನ್ನು ಪ್ರತಿ 4 ತಿಂಗಳಿಗೊಮ್ಮೆ ರೂ. 2,000 ರೂ.ಗಳಂತೆ 3 ಕಂತುಗಳಲ್ಲಿ ನೀಡಲಾಗುತ್ತಿದೆ. ಈ ಪ್ರೋತ್ಸಾಹಧನವನ್ನು ಮುಂದುವರಿಸಲು ಫ್ರೂಟ್ಸ್ ತಂತ್ರಾಂಶದ ಗುರುತಿನ ಸಂಖ್ಯೆಯಂತೆ ಕೇಂದ್ರ ಸರ್ಕಾರವು ಅಗ್ರಿಸ್ಟ್ಯಾಕ್ ಯೋಜನೆಯಡಿ ಗುರುತಿನ ಸಂಖ್ಯೆಯನ್ನು ಸೃಷ್ಟಿಸುವುದು ಕಡ್ಡಾಯವಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಪಿ.ಎಂ.ಕಿಸಾನ್ ಯೋಜನೆಯಡಿ ಒಟ್ಟು 1,36,616 ಫಲಾನುಭವಿಗಳಿದ್ದಾರೆ. ತಾಲ್ಲೂಕುವಾರು ವಿವರ ಹೀಗಿದೆ: ಶಿವಮೊಗ್ಗ-18,065, ಭದ್ರಾವತಿ-18,920, ತೀರ್ಥಹಳ್ಳಿ-16,216, ಸಾಗರ-19,916, ಹೊಸನಗರ-12,634, ಶಿಕಾರಿಪುರ-25,196 ಹಾಗೂ ಸೊರಬ-25,669. ಈ ಪೈಕಿ ಇ-ಕೆವೈಸಿ ಬಾಕಿ ಇರುವ ರೈತರು ಕೂಡಲೇ ಅದನ್ನು ಪೂರ್ಣಗೊಳಿಸಬೇಕಾಗಿದೆ.
ಇ-ಕೆವೈಸಿ ಮಾಡಿಸುವ ವಿಧಾನ:
ರೈತರು ಎರಡು ವಿಧಾನಗಳ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು:
ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಿಗೆ(ಸಿ.ಎಸ್.ಸಿ.) ಭೇಟಿ ನೀಡಿ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಮಾಡಿಸಬಹುದು.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ‘PMKISAN e-KYC through FaceRecognition App’ ಮೂಲಕ ಮುಖ (ಫೇಸ್) ದೃಢೀಕರಣದ ಆಧಾರದ ಮೇಲೆಯೂ ರೈತ ಸಂಪರ್ಕ ಕೇಂದ್ರಗಳಲ್ಲಿ ಇ-ಕೆವೈಸಿ ಮಾಡಿಕೊಳ್ಳಬಹುದು.
ಆದ್ದರಿಂದ ಜಿಲ್ಲೆಯ ಫಲಾನುಭವಿ ರೈತರು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬಾಕಿ ಇರುವ ಇ-ಕೆವೈಸಿಯನ್ನು ತಕ್ಷಣವೇ ಪೂರ್ಣಗೊಳಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ.
ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಶಿವಮೊಗ್ಗ:. ಕರ್ನಾಟಕ ಸವಿತಾ ಸಮಾಜದ ಅಭಿವೃದ್ಧಿ ನಿಗಮದಿಂದ 2026-27 ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಸಾಲ ಯೋಜನೆಗಳಡಿಯಲ್ಲಿ ಸೌಲಭ್ಯ ಪಡೆಯಲು ಹಿಂದುಳಿದ ವರ್ಗಗಳ ಸೇರಿದ ಸವಿತಾ ಸಮಾಜ ಮತ್ತು ಅದರ ಉಪಜಾತಿಗಳಿಗೆ ಸೇರಿದ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ, ಈಡಿಗ, ತಿಗಳ, ಕುಂಬಾರ, ಹಡಪದ, ಗಾಣಿಕ ಮತ್ತು ಇದರ ಉಪ ಸಮುದಾಯಗಳನ್ನು ಹೊರತುಪಡಿಸಿ) ಸಮುದಾಯಗಳ ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಅಬಹುದು.
ಈ ಮೇಲಿನ ಎಲ್ಲಾ ಯೋಜನೆಗಳ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್ ನಲ್ಲಿರುವಂತೆ ಅರ್ಜಿದಾರರ ಹೆಸರು ಮತ್ತು ಇತರೆ ದಾಖಾಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದಲ್ಲಿಯೂ ಇದ್ದೂ ಹೊಂದಾಣಿಕೆಯಾಗಬೇಕು. ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ. 2024-25 ಮತ್ತು 2025-26 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಆಸಕ್ತರು ಸೇವಾಸಿಂಧು ಪೋರ್ಟಲ್ http:/sevasindhu.karnataka.gov.in ಮುಖಾಂತರ ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರೀಕ ಸೇವಾಕೇಂದ್ರಗಳಲ್ಲಿ ದಾಖಲೆಗಳ ಸಹಿತ ದಿ:01/10/2026 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ ಸೈಟ್ www.kssd.karnataka.gov.in, ದೂ.ಸಂ.: 080-22374832/8050770004/8050770005 ಅಥವಾ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ, ದೇವರಾಜ ಅರಸು ಭವನ, ಬಾಲರಾಜ್ ಅರಸು ರಸ್ತೆ, ಕೆ.ಇ.ಬಿ. ಸರ್ಕಲ್ ಹತ್ತಿರ, ಶಿವಮೊಗ್ಗ, ಕಛೇರಿ ದೂ.ಸಂ. 08182-229634ನ್ನು ಸಂಪರ್ಕಿಸಬಹುದೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

