HomeLatest NewsPM ವಿದ್ಯಾಲಕ್ಷ್ಮಿ ಯೋಜನೆ: ಅಡಮಾನವಿಲ್ಲದೆ ಶಿಕ್ಷಣ ಸಾಲ ಪಡೆಯುವುದು ಹೇಗೆ?

PM ವಿದ್ಯಾಲಕ್ಷ್ಮಿ ಯೋಜನೆ: ಅಡಮಾನವಿಲ್ಲದೆ ಶಿಕ್ಷಣ ಸಾಲ ಪಡೆಯುವುದು ಹೇಗೆ?

ನವದೆಹಲಿ: ಉನ್ನತ ಶಿಕ್ಷಣದ ಕನಸು ಕಾಣುತ್ತಿರುವ ದೇಶದ ಮಧ್ಯಮ ವರ್ಗದ ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಪಿಎಂ-ವಿದ್ಯಾಲಕ್ಷ್ಮಿ ಯೋಜನೆ ದೊಡ್ಡ ಆಶಾಕಿರಣವಾಗಿ ಹೊರಹೊಮ್ಮಿದೆ. ಹಣಕಾಸಿನ ಅಭಾವದಿಂದಾಗಿ ಯಾವುದೇ ವಿದ್ಯಾರ್ಥಿಯ ಉನ್ನತ ವ್ಯಾಸಂಗ ಮೊಟಕುಗೊಳ್ಳಬಾರದು ಎಂಬ ಉದ್ದೇಶದಿಂದ ಜಾರಿಗೆ ತರಲಾದ ಈ ಯೋಜನೆ, ಸಂಪೂರ್ಣ ಡಿಜಿಟಲ್ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಶೈಕ್ಷಣಿಕ ಸಾಲ ಹಾಗೂ ಬಡ್ಡಿ ಸಬ್ಸಿಡಿ ಸೌಲಭ್ಯವನ್ನು ಒದಗಿಸುತ್ತಿದೆ.

ಪೋರ್ಟಲ್‌ನ ಇತ್ತೀಚಿನ ಡ್ಯಾಶ್‌ಬೋರ್ಡ್ ಅಂಕಿ-ಅಂಶಗಳ ಪ್ರಕಾರ, ದೇಶಾದ್ಯಂತ ಸುಮಾರು 4.99 ಲಕ್ಷ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ ಬರೋಬ್ಬರಿ ₹59,083 ಕೋಟಿಗೂ ಅಧಿಕ ಮೊತ್ತದ ಸಾಲ ಮಂಜೂರಾಗಿದೆ. ಈಗಾಗಲೇ 4.06 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ₹15,919 ಕೋಟಿಗೂ ಅಧಿಕ ಮೊತ್ತ ಪಾವತಿಯಾಗಿದೆ.

ಯಾವುದೇ ಆಸ್ತಿ ಅಡಮಾನವಿಲ್ಲದೆ ಶೈಕ್ಷಣಿಕ ಸಾಲ

ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ, ಮಾನ್ಯತೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ಶ್ಯೂರಿಟಿ/ಗ್ಯಾರಂಟರ್ ಅಥವಾ ಆಸ್ತಿ ಅಡಮಾನ ಇಲ್ಲದೆಯೇ ಬ್ಯಾಂಕ್‌ಗಳು ಸಾಲ ಒದಗಿಸುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕ್ರೆಡಿಟ್ ಗ್ಯಾರಂಟಿ ಸೌಲಭ್ಯ: ವಿದ್ಯಾರ್ಥಿಗಳು ಪಡೆಯುವ ₹7.5 ಲಕ್ಷದವರೆಗಿನ ಸಾಲದ ಮೊತ್ತಕ್ಕೆ ಕೇಂದ್ರ ಸರ್ಕಾರವೇ ಶೇ. 75ರಷ್ಟು ಕ್ರೆಡಿಟ್ ಗ್ಯಾರಂಟಿ (Credit Guarantee) ನೀಡುತ್ತದೆ. ಸರ್ಕಾರದ ಈ ಖಾತರಿಯಿಂದಾಗಿ ಬ್ಯಾಂಕ್‌ಗಳು ವಿದ್ಯಾರ್ಥಿಗಳಿಗೆ ಯಾವುದೇ ಕಿರಿಕಿರಿಯಿಲ್ಲದೆ ಸಾಲ ವಿತರಿಸುತ್ತಿವೆ.

₹892 ಕೋಟಿ ಬಡ್ಡಿ ಸಬ್ಸಿಡಿ ವಿತರಣೆ

ಸಾಲ ನೀಡಿಕೆಯ ಜೊತೆಗೆ ಅರ್ಹ ವಿದ್ಯಾರ್ಥಿಗಳಿಗೆ ಬಡ್ಡಿ ಸಬ್ಸಿಡಿ ನೀಡಲಾಗುತ್ತಿದೆ.ಇಲ್ಲಿಯವರೆಗೆ 4.15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬಡ್ಡಿ ಸಬ್ಸಿಡಿಯ ಲಾಭ ಪಡೆದಿದ್ದು, ಸರ್ಕಾರ ಒಟ್ಟು ₹892.94 ಕೋಟಿ ಬಡ್ಡಿ ಸಹಾಯಧನವನ್ನು ಬಿಡುಗಡೆ ಮಾಡಿದೆ.

ವಿಶೇಷವೆಂದರೆ, ಈ ಸಬ್ಸಿಡಿ ಹಣವನ್ನು ‘ಡಿಜಿಟಲ್ ರೂಪಾಯಿ ವ್ಯಾಲೆಟ್’ (Digital Rupee Wallet) ಮೂಲಕ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ವರ್ಗಾಯಿಸಲಾಗುತ್ತಿದೆ.

ಪಿಎಂ-ವಿದ್ಯಾಲಕ್ಷ್ಮಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ವಿದ್ಯಾರ್ಥಿಗಳು ಒಂದೇ ಒಂದು ‘ಸಾಮಾನ್ಯ ಅರ್ಜಿ ನಮೂನೆ’ ಭರ್ತಿ ಮಾಡುವ ಮೂಲಕ ತಮ್ಮಿಷ್ಟದ ವಿವಿಧ ಬ್ಯಾಂಕ್‌ಗಳಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯ 3 ಪ್ರಮುಖ ಹಂತಗಳು ಇಲ್ಲಿವೆ:

ನೊಂದಣಿ : ಮೊದಲಿಗೆ ವಿದ್ಯಾರ್ಥಿಗಳು ಅಧಿಕೃತ ‘PM-Vidyalaxmi’ ಪೋರ್ಟಲ್‌ಗೆ ಭೇಟಿ ನೀಡಿ ತಮ್ಮ ಹೆಸರು, ಇಮೇಲ್ ಹಾಗೂ ಮೊಬೈಲ್ ಸಂಖ್ಯೆ ನೀಡಿ ಹೊಸ ಖಾತೆ (Account) ತೆರೆಯಬೇಕು.

ಅರ್ಜಿ ಭರ್ತಿ : ನೊಂದಣಿ ನಂತರ ‘Common Education Loan Application Form’ ತೆರೆದು, ವಿದ್ಯಾರ್ಥಿ ತಾವು ಆಯ್ಕೆ ಮಾಡಿಕೊಂಡಿರುವ ಕೋರ್ಸ್, ಶಿಕ್ಷಣ ಸಂಸ್ಥೆಯ ವಿವರ, ಆಡಳಿತಾತ್ಮಕ ಶುಲ್ಕ ಮತ್ತು ಅಗತ್ಯ ಸಾಲದ ವಿವರಗಳನ್ನು ಸರಿಯಾಗಿ ದಾಖಲಿಸಬೇಕು.

ಬ್ಯಾಂಕ್ ಆಯ್ಕೆ ಮತ್ತು ಸಲ್ಲಿಕೆ : ಕೋರ್ಸ್ ವಿವರ ಭರ್ತಿ ಮಾಡಿದ ಬಳಿಕ, ಪೋರ್ಟಲ್‌ನಲ್ಲಿ ಕಾಣಿಸುವ ಬ್ಯಾಂಕ್‌ಗಳ ಪಟ್ಟಿಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕ ಬ್ಯಾಂಕ್‌ಗಳನ್ನು ಆಯ್ಕೆ ಮಾಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.

ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಈ ಅಧಿಕೃತ ಪೋರ್ಟಲ್ ಬಳಸಿಕೊಂಡು ಸರಳವಾಗಿ ಸಾಲ ಸೌಲಭ್ಯ ಪಡೆಯಬಹುದಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular