ಬಾಲಿವುಡ್ನ ಹಿರಿಯ ನಟಿ ಮಾಧುರಿ ದೀಕ್ಷಿತ್ ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ಭಾರಿ ಯಶಸ್ಸು ಕಂಡಿದ್ದಾರೆ. ಮುಂಬೈನ ಅಂಧೇರಿ ವೆಸ್ಟ್ನಲ್ಲಿರುವ ತಮ್ಮ ವಾಣಿಜ್ಯ ಕಚೇರಿಯನ್ನು ಬರೋಬ್ಬರಿ ೪.೮೫ ಕೋಟಿ ರೂಪಾಯಿಗೆ ಮಾರಾಟ ಮಾಡುವ ಮೂಲಕ ದೊಡ್ಡ ಮಟ್ಟದ ಲಾಭ ಗಳಿಸಿದ್ದಾರೆ. ಫ್ರೇಮ್ಸ್ ಪ್ರೊಡಕ್ಷನ್ ಕಂಪನಿಗೆ ಈ ಆಸ್ತಿಯನ್ನು ಮಾರಾಟ ಮಾಡಲಾಗಿದ್ದು, ಇತ್ತೀಚೆಗೆ ಇದರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ.
ಅಂಧೇರಿಯ ಮೋರ್ಯ ಲ್ಯಾಂಡ್ಮಾರ್ಕ್ ಕಟ್ಟಡದಲ್ಲಿರುವ ೧,೫೯೪ ಚದರ ಅಡಿಯ ಈ ಆಸ್ತಿಯನ್ನು ಮಾಧುರಿ ದೀಕ್ಷಿತ್ ೨೦೦೮ರಲ್ಲಿ ಕೇವಲ ೫೨.೫ ಲಕ್ಷ ರೂಪಾಯಿಗೆ ಖರೀದಿಸಿದ್ದರು. ಸುಮಾರು ೧೮ ವರ್ಷಗಳ ನಂತರ ಈ ಆಸ್ತಿಯ ಮೌಲ್ಯ ಶೇಕಡಾ ೮೨೪ರಷ್ಟು ಹೆಚ್ಚಾಗಿದ್ದು, ಮೂಲ ಬೆಲೆಗಿಂತ ಸುಮಾರು ೯ ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದೆ. ಮುಂಬೈನ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಮೌಲ್ಯ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಈ ವ್ಯವಹಾರ ಉದಾಹರಣೆಯಾಗಿದೆ.
ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ. ಶ್ರೀರಾಮ್ ನೆನೆ ಮುಂಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುತ್ತಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಜುಹು ಪ್ರದೇಶದಲ್ಲಿದ್ದ ತಮ್ಮ ಫ್ಲ್ಯಾಟ್ ಅನ್ನು ೩.೯ ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದ ಈ ದಂಪತಿ, ಈ ವರ್ಷದ ಮಾರ್ಚ್ನಲ್ಲಿ ಲೋವರ್ ಪರೇಲ್ ಪ್ರದೇಶದಲ್ಲಿ ಹೊಸ ಆಫೀಸ್ ಜಾಗವನ್ನು ಬಾಡಿಗೆಗೆ ಪಡೆದುಕೊಂಡಿದ್ದರು.

