ರಾಯಚೂರು: ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನವಜೋಡಿಯೊಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮದುವೆ ಆಮಂತ್ರಣ ಪತ್ರಿಕೆ ಕಳುಹಿಸಿದ್ದು, ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಪ್ರಧಾನಿ ಮೋದಿ ನವ ಜೋದಿಗೆ ಸಿಹಿಸುದ್ದಿ ನೀಡಿದ್ದಾರೆ.
ರಾಯಚೂರಿನ ಸಾಮಾನ್ಯ ಯುವಕನೊಬ್ಬ ಪ್ರೀತಿಯಿಂದ ಕಳುಹಿಸಿದ ತನ್ನ ಮದುವೆ ಆಮಂತ್ರಣ ಪತ್ರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷವಾಗಿ ಸ್ಪಂದಿಸಿದ್ದು, ನವಜೋಡಿಗೆ ಶುಭಾಶಯ ಪತ್ರ ಕಳುಹಿಸಿದ್ದಾರೆ. ಈ ಮೂಲಕ ನವಜೋಡಿಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ರಾಜೇಶ್ ನಾಯಕ್ ಇದೇ ತಿಂಗಳ ಏಪ್ರಿಲ್ 13 ರಂದು ಸವಿತಾ ಎಂಬುವವರ ಜೊತೆ ಮದುವೆ ನಿಶ್ಚಯವಾಗಿತ್ತು. ತಮ್ಮ ಮದುವೆಗೆ ನವಜೋಡಿ ಪ್ರಧಾನಿ ಮೋದಿಯವರನ್ನೂ ಆಹ್ವಾನಿಸಿ ಆಹ್ವಾನ ಪತ್ರಿಕೆ ಕಳುಹಿಸಿದ್ದರು.
ದೆಹಲಿಯ ಪ್ರಧಾನಿ ಕಚೇರಿಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ರವಾನಿಸಿದ್ದು, ಸಾಮಾನ್ಯ ಪ್ರಜೆಯ ಈ ಆಹ್ವಾನವನ್ನು ಸ್ವೀಕರಿಸಿದ ಪ್ರಧಾನಿ ಮೋದಿ, ಪತ್ರದ ಮೂಲಕ ನವಜೋಡಿಗೆ ಶುಭ ಹಾರೈಸಿದ್ದಾರೆ.
ರಾಜೇಶ್ ನಾಯಕ್ ಅವರಿಗೆ ಪತ್ರ ಬರೆದಿರುವ ಪ್ರಧಾನಿ ಮೋದಿ, ನಿಮ್ಮ ವಿವಾಹ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಜೀವನದ ಈ ಶುಭ ಸಂದರ್ಭಕ್ಕೆ ಕಾಲಿಡುತ್ತಿರುವ ನಿಮಗೆ ಮತ್ತು ಸವಿತಾ ಅವರಿಗೆ ಸುಂದರ ಭವಿಷ್ಯಕ್ಕಾಗಿ ಶುಭಾಶೀರ್ವಾದಗಳು. ನಿಮ್ಮಿಬ್ಬರ ಹೃದಯ, ಮನಸ್ಸು ಮತ್ತು ಕ್ರಿಯೆಗಳು ಒಂದಾಗಿರಲಿ. ಜೀವನದ ಏರಿಳಿತಗಳಲ್ಲಿ ಪರಸ್ಪರ ಕೈಹಿಡಿದು, ಕನಸುಗಳನ್ನು ಸಾಕಾರಗೊಳಿಸುತ್ತಾ, ಜವಾಬ್ದಾರಿಗಳನ್ನು ಪ್ರೀತಿಯಿಂದ ನಿಭಾಯಿಸಿ. ಪರಸ್ಪರರ ದೋಷಗಳನ್ನು ಒಪ್ಪಿಕೊಂಡು, ಗುಣಗಳನ್ನು ಗೌರವಿಸುತ್ತಾ ಆದರ್ಶ ದಂಪತಿಗಳಾಗಿ ಬಾಳಿ. ನಿಮ್ಮ ದಾಂಪತ್ಯ ಜೀವನ ಸುದೀರ್ಘ, ಸುಖಮಯ ಮತ್ತು ಸುಂದರವಾಗಿರಲಿ ಎಂದು ಹಾರೈಸಿದ್ದಾರೆ.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ರಾಜೇಶ್, ಇದೇ ತಿಂಗಳು ಏಪ್ರಿಲ್ 13 ನಮ್ಮ ಮದುವೆಯಿತ್ತು. ಕೆಲವೇ ವಾರಗಳ ಮೊದಲು ಪ್ರಧಾನಿ ಮೋದಿಯವರಿಗೆ ಮದುವೆಯ ಆಹ್ವಾನ ಪತ್ರಿಕೆ ಕಳುಹಿಸಿದ್ದೆ. ಅವರ ಕಡೆಯಿಂದ ಉತ್ತರ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಹೆಚ್ಚೇನೂ ನಿರೀಕ್ಷೆ ಇರಲಿಲ್ಲ. ಇದೀಗ ಪ್ರಧಾನಿಯವರಿಂದ ಶುಭಾಶಯ ಪತ್ರ ಬಂದಿದೆ. ಅಷ್ಟೊಂದು ದೊಡ್ಡ ಹುದ್ದೆಯಲ್ಲಿದ್ದು, ದೇಶದ ಸಾಮಾನ್ಯ ಪ್ರಜೆಯೊಬ್ಬನ ಪತ್ರವನ್ನೂ ಅವರು ಪರಿಗಣಿಸುತ್ತಾರೆ ಎಂಬುದು ನಿಜಕ್ಕೂ ಅದ್ಭುತ. ಅವರಿಗೆ ನಮ್ಮ ಕಡೆಯಿಂದ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.

