ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿ.ಎಂ-ಕಿಸಾನ್) ಯೋಜನೆಯಡಿ ಪ್ರೋತ್ಸಾಹಧನವನ್ನು ನಿರಂತರವಾಗಿ ಪಡೆಯಲು ಎಲ್ಲಾ ಅರ್ಹ ರೈತರು ಪ್ರತಿ ವರ್ಷ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, 2019 ರ ಫೆಬ್ರವರಿ 1ರ ಪೂರ್ವದಲ್ಲಿ ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ಸಣ್ಣ, ಅತಿಸಣ್ಣ, ಮಧ್ಯಮ ಮತ್ತು ದೊಡ್ಡ ರೈತ ಕುಟುಂಬಗಳಿಗೆ ವರ್ಷಕ್ಕೆ ರೂ. 6,000/- ಪ್ರೋತ್ಸಾಹಧನವನ್ನು ಪ್ರತಿ 4 ತಿಂಗಳಿಗೊಮ್ಮೆ 3 ಕಂತುಗಳಲ್ಲಿ (ತಲಾ ರೂ.2,000/-) ನೇರವಾಗಿ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ಹಣ ಪಾವತಿಯನ್ನು ಮುಂದುವರಿಸಲು ‘ಫ್ರೂಟ್ಸ್’ ತಂತ್ರಾಂಶದ ಗುರುತಿನ ಸಂಖ್ಯೆಯಂತೆ ಅಗ್ರಿಸ್ಟ್ಯಾಕ್ ಯೋಜನೆ ಅಡಿ ಗುರುತಿನ ಸಂಖ್ಯೆಯನ್ನು ಸೃಜಿಸುವುದು ಕಡ್ಡಾಯಗೊಳಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 1,40,366 ಫಲಾನುಭವಿಗಳಿದ್ದು, ಇದರಲ್ಲಿ 1,40,256 ರೈತರ ಬಯೋಮೆಟ್ರಿಕ್ ಇ-ಕೆವೈಸಿ ಪ್ರಕ್ರಿಯೆ ಇನ್ನೂ ಬಾಕಿ ಉಳಿದಿದೆ.ತಾಲೂಕುವಾರು ಬಾಕಿ ವಿವರ: ಶಿವಮೊಗ್ಗ 18,565, ಭದ್ರಾವತಿ: 19,420, ತೀರ್ಥಹಳ್ಳಿ 16,716, ಸಾಗರ 20,416, ಹೊಸನಗರ 13,134, ಶಿಕಾರಿಪುರ 25,836, ಸೊರಬ 26,169.
ರೈತರು ಸಮೀಪದ ಸಿಎಸ್‌ಸಿ ಕೇಂದ್ರಗಳಿಗೆ ಭೇಟಿ ನೀಡಿ ಬೆರಳಚ್ಚು/ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಿಸಬಹುದು. ಹಾಗೂ ಕೇಂದ್ರ ಸರ್ಕಾರದ ‘PMKISAN e-KYC through FaceRecognition App’ ಮೂಲಕ ಮುಖ (ಫೇಸ್) ದೃಢೀಕರಣದ ಆಧಾರದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು.
ಆದ್ದರಿಂದ, ಫಲಾನುಭವಿ ರೈತರು ಕೂಡಲೇ ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಹತ್ತಿರದ ಸಿಎಸ್‌ಸಿ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಯೋಜನೆಯ ಸೌಲಭ್ಯವನ್ನು ಮುಂದುವರಿಸಬೇಕಾಗಿ ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ.
ವಿಶೇಷ ಘಟಕ ಯೋಜನೆ/ಗಿರಿಜನ ಉಪ ಯೋಜನೆಯಡಿ ಉದ್ದಿಮೆದಾರರಿಗೆ ನೆರವು : ಅರ್ಜಿ ಆಹ್ವಾನ
ಶಿವಮೊಗ್ಗ : ರಾಜ್ಯ ಸರ್ಕಾರವು ವಿಶೇಷ ಘಟಕ ಯೋಜನೆ/ಗಿರಿಜನ ಉಪ ಯೋಜನೆಯಡಿ ಸಾಫ್ಟ್ ಸೀಡ್ ಕ್ಯಾಪಿಟಲ್, ಶೇ. 60 ಸಹಾಯಧನ, ಸಾಲ ಶುಲ್ಕ ಮರುಪಾವತಿ ಮತ್ತು ವಿದ್ಯುಚ್ಛಕ್ತಿ ಸಹಾಯಧನ ಯೋಜನೆಗಳಡಿ ಅರ್ಹ ಉದ್ದಿಮೆದಾರರಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಿದೆ.
ಈಗಾಗಲೇ ಬ್ಯಾಂಕಿನಿಂದ ಸಾಲ ಪಡೆದು ಘಟಕಗಳನ್ನು ಸ್ಥಾಪಿಸಿರುವ ಅರ್ಹ ಉದ್ದಿಮೆದಾರರು ಹಾಗೂ ಬ್ಯಾಂಕ್ ಸಾಲ ಪಡೆದು ಉದ್ದಿಮೆ ಸ್ಥಾಪಿಸಲು ಇಚ್ಚಿಸಿರುವ ಉದ್ದಿಮೆದಾರರು ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ನೆಹರೂ ರಸ್ತೆ, ಶಿವಮೊಗ್ಗ ಇವರನ್ನು ಸಂಪರ್ಕಿಸುವಂತೆ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ
ಶಿವಮೊಗ್ಗ : ಭದ್ರಾವತಿ ಶಿಶು ಅಭಿವೃದ್ಧಿ ಯೋಜನೆಯಡಿಯ 16 ಅಂಗನವಾಡಿ ಕಂ ಕ್ರಷ್ ಕೇಂದ್ರಗಳಲ್ಲಿ ಖಾಲಿಯಿರುವ 1 ಕಾರ್ಯಕರ್ತೆ ಹಾಗೂ 1 ಸಹಾಯಕಿಯರ ತಾತ್ಕಾಲಿಕ ಗೌರವಧನ ಆಧಾರದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅರ್ಜಿ ನಮೂನೆಯನ್ನು ಭದ್ರಾವತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಆ.29 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಭದ್ರಾವತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ದೂ.ಸಂ.: 08282-295051 ನ್ನು ಸಂಪರ್ಕಿಸುವಂತೆ ಭದ್ರಾವತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

