ನಮ್ಮ ದೈನಂದಿನ ಜೀವನದ ಸಣ್ಣಪುಟ್ಟ ಅಭ್ಯಾಸಗಳು ದೀರ್ಘಕಾಲದ ಮೇಲೆ ನಮ್ಮ ಆರೋಗ್ಯವನ್ನು ಹೇಗೆ ಹಾಳುಮಾಡುತ್ತವೆ ಎಂಬುದರ ಬಗ್ಗೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಜೆರೆಮಿ ಲಂಡನ್ ಆಘಾತಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 25 ವರ್ಷಗಳ ಕಾಲ ಹೃದಯದ ಶಸ್ತ್ರಚಿಕಿತ್ಸೆ ನಡೆಸಿದ ಅನುಭವ ಹೊಂದಿರುವ ಅವರು, ನಾವು ಸುರಕ್ಷಿತ ಎಂದು ಭಾವಿಸುವ ಕೆಲವು ಹವ್ಯಾಸಗಳು ಎಷ್ಟು ಅಪಾಯಕಾರಿ ಎಂಬುದನ್ನು 1 ರಿಂದ 10 ರ ಅಳತೆಯಲ್ಲಿ ಶ್ರೇಣೀಕರಿಸಿದ್ದಾರೆ.
ವೈದ್ಯರು ನೀಡಿದ ಎಚ್ಚರಿಕೆಯ ಪಟ್ಟಿಯಲ್ಲಿರುವ ಪ್ರಮುಖ ಅಂಶಗಳು ಇಲ್ಲಿವೆ:
ಸಂಸ್ಕರಿಸಿದ ಮಾಂಸ (Processed Meat): ಹಾಟ್ ಡಾಗ್ ಅಥವಾ ಪ್ಯಾಕ್ ಮಾಡಿದ ಮಾಂಸದ ಉತ್ಪನ್ನಗಳಿಗೆ ವೈದ್ಯರು 5 ಅಂಕ ನೀಡಿದ್ದಾರೆ. ಇವುಗಳಲ್ಲಿರುವ ನೈಟ್ರೇಟ್ ಮತ್ತು ಪ್ರಿಸರ್ವೇಟಿವ್‌ಗಳು ಕ್ಯಾನ್ಸರ್ ಮತ್ತು ಟೈಪ್-2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತವೆ. ಇವುಗಳನ್ನು ನಿಯಮಿತವಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಪ್ಲಾಸ್ಟಿಕ್ ಕಟಿಂಗ್ ಬೋರ್ಡ್‌ಗಳ ಬಳಕೆ: ಇದನ್ನು ವೈದ್ಯರು 5ನೇ ಸ್ಥಾನದಲ್ಲಿಟ್ಟಿದ್ದಾರೆ. ನೀವು ಒಂದು ವರ್ಷ ಪ್ಲಾಸ್ಟಿಕ್ ಬೋರ್ಡ್ ಮೇಲೆ ತರಕಾರಿ ಕತ್ತರಿಸಿದರೆ, ಸರಿಸುಮಾರು 10 ಕ್ರೆಡಿಟ್ ಕಾರ್ಡ್‌ಗಳಿಗೆ ಸಮಾನವಾದ ಮೈಕ್ರೋಪ್ಲಾಸ್ಟಿಕ್ ನಿಮ್ಮ ಹೊಟ್ಟೆ ಸೇರುತ್ತದೆ. ಇದು ಹಾರ್ಮೋನ್ ಸಮತೋಲನ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಬದಲಿಗೆ ಮರದ ಬೋರ್ಡ್ ಬಳಸುವುದು ಉತ್ತಮ.
ಗಾಂಜಾ ಸೇವನೆ (Marijuana): ಅನೇಕರು ಗಾಂಜಾ ನೈಸರ್ಗಿಕ, ಆದ್ದರಿಂದ ಸುರಕ್ಷಿತ ಎಂದು ಭಾವಿಸುತ್ತಾರೆ. ಆದರೆ ವೈದ್ಯರು ಇದಕ್ಕೆ 8 ಅಂಕ ನೀಡಿದ್ದು, ಇದು ಹೃದಯದ ಕಾಯಿಲೆಗಳ ಅಪಾಯವನ್ನು ಬಹುವಾಗಿ ಹೆಚ್ಚಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಒಂಟಿತನ (Loneliness): ಅಚ್ಚರಿಯೆಂದರೆ ಒಂಟಿತನಕ್ಕೆ ವೈದ್ಯರು 8 ಅಂಕ ನೀಡಿದ್ದಾರೆ. ಹೌದು, ದೀರ್ಘಕಾಲದ ಒಂಟಿತನವು ಧೂಮಪಾನ ಅಥವಾ ಬೊಜ್ಜಿನಷ್ಟೇ ಅಪಾಯಕಾರಿ. ಸಾಮಾಜಿಕವಾಗಿ ಜನರೊಂದಿಗೆ ಬೆರೆಯುವುದು ಹೃದಯದ ಆರೋಗ್ಯಕ್ಕೆ ಅತ್ಯಗತ್ಯ.
ಮದ್ಯಪಾನ (Alcohol): ಈ ಪಟ್ಟಿಯಲ್ಲಿ ಮದ್ಯಪಾನಕ್ಕೆ ವೈದ್ಯರು ಪೂರ್ಣ 10 ಅಂಕ ನೀಡಿದ್ದಾರೆ. ಅಂದರೆ ಇದು ಅತ್ಯಂತ ಅಪಾಯಕಾರಿ. ಮದ್ಯವು ಕೇವಲ ಲಿವರ್ ಮಾತ್ರವಲ್ಲದೆ ದೇಹದ ಪ್ರತಿಯೊಂದು ಜೀವಕೋಶಕ್ಕೂ ವಿಷಕಾರಿಯಾಗಿದೆ. ಯಾವುದೇ ಪ್ರಮಾಣದ ಮದ್ಯಪಾನವು ಆರೋಗ್ಯಕ್ಕೆ ಸುರಕ್ಷಿತವಲ್ಲ ಎಂದು ಅವರು ಖಡಾಖಡಿಯಾಗಿ ಹೇಳಿದ್ದಾರೆ.

