HomeKarnatakaದಾವಣಗೆರೆ ದಕ್ಷಿಣ: ಬಿಜೆಪಿ ಮನೆಯೊಂದು ಮೂರು ಬಾಗಿಲು, ಟಿಕೆಟ್ ಜಿದ್ದಾಜಿದ್ದಿ!

ದಾವಣಗೆರೆ ದಕ್ಷಿಣ: ಬಿಜೆಪಿ ಮನೆಯೊಂದು ಮೂರು ಬಾಗಿಲು, ಟಿಕೆಟ್ ಜಿದ್ದಾಜಿದ್ದಿ!

ಕಾಂಗ್ರೆಸ್‌ನ ಹಿರಿಯ ನಾಯಕ, ದಾವಣಗೆರೆ ಧಣಿ ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಆದರೆ ಕ್ಷೇತ್ರದ ಟಿಕೆಟ್‌ಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಭಾರೀ ಪೈಪೋಟಿ ಇದ್ದು, ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಶಾಮನೂರು ಶಿವಶಂಕರಪ್ಪ 2008, 2013, 2018 ಮತ್ತು 2023ರಲ್ಲಿ ಗೆದ್ದು ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್ ಸಿಗಲಿದೆ ಎಂಬ ಚರ್ಚೆ ಈಗ ಬೇರೆ ಹಾದಿಯಲ್ಲಿ ಸಾಗುತ್ತಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 80 ಸಾವಿರ ಮುಸ್ಲಿಂ ಮತಗಳಿವೆ. ಅಲ್ಲದೇ ಶಾಮನೂರು ಶಿವಶಂಕರಪ್ಪ 2023ರ ಚುನಾವಣೆಯ ಸಂದರ್ಭದಲ್ಲಿ ಮುಂದೆ ಮುಸ್ಲಿಮರಿಗೆ ಟಿಕೆಟ್ ಕೊಡುವುದಾಗಿ ಹೇಳಿದ್ದ ವಿಡಿಯೋ ಈಗ ಸಂಚಲನ ಮೂಡಿಸಿದೆ. ಉಪ ಚುನಾವಣೆ ಟಿಕೆಟ್ ಬಗ್ಗೆ ಶಾಮನೂರು ಶಿವಶಂಕರಪ್ಪ ಕುಟುಂಬದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳು: ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್ ನೀಡದಿದ್ದರೆ ಮುಸ್ಲಿಮರಿಗೆ ನೀಡಬೇಕು ಎಂಬುದು ಬೇಡಿಕೆ. ಈ ಬೇಡಿಕೆ ಮುಂದಿಟ್ಟುಕೊಂಡು ಕ್ಷೇತ್ರದ ಕಾಂಗ್ರೆಸ್ ಮುಖಂಡರು ಸಚಿವ ಜಮೀರ್ ಅಹ್ಮದ್ ಖಾನ್ ಬೆನ್ನು ಬಿದ್ದಿದ್ದಾರೆ. ಶಾಮನೂರು ಶಿವಶಂಕರಪ್ಪ ಕುಟುಂಬವನ್ನು ಕೇಳಿಯೇ ಕಾಂಗ್ರೆಸ್ ಮುಂದಿನ ಹೆಜ್ಜೆ ಇಡಲಿದೆ ಎಂಬುದು ಮಾಹಿತಿ.

2023ರ ಚುನಾವಣೆಯಲ್ಲಿಯೇ ಕಾಂಗ್ರೆಸ್‌ ಟಿಕೆಟ್‌ಗಾಗಿ ದಾವಣಗೆರೆ ದಕ್ಷಿಣದಲ್ಲಿ 5 ಅರ್ಜಿ ಸಲ್ಲಿಕೆಯಾಗಿತ್ತು. ಅಂತಿಮವಾಗಿ ಶಾಮನೂರು ಶಿವಶಂಕರಪ್ಪ ಟಿಕೆಟ್ ಪಡೆದು, ಗೆದ್ದು ಕ್ಷೇತ್ರವನ್ನು ಕಾಂಗ್ರೆಸ್‌ಗೆ ಉಳಿಸಿಕೊಟ್ಟರು. ಆದರೆ ಅವರ ಅನುಪಸ್ಥಿತಿಯಲ್ಲಿ ನಡೆಯುವ ಉಪ ಚುನಾವಣೆ ಲೆಕ್ಕಾಚಾರ ಬದಲಾಗಿದೆ.

ಸೈಯದ್ ಸೈಫುಲ್ಲಾ, ಅವರ ಪುತ್ರರಾದ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್, ಎಂಎಲ್​ಸಿ ಅಬ್ದುಲ್ ಜಬ್ಬಾರ್ ಹಾಗೂ ಅಯೂಬ್ ಪೈಲ್ವಾನ್ ಮತ್ತು ಇತರರ ಹೆಸರು ಕಾಂಗ್ರೆಸ್‌ ಟಿಕೆಟ್‌ಗೆ ಕೇಳಿ ಬರುತ್ತಿದೆ. ಮುಸ್ಲಿಮವರಿಗೆ ಟಿಕೆಟ್ ನೀಡದಿದ್ದರೆ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇವೆ ಎಂಬ ಸಂದೇಶವೂ ರವಾನೆಯಾಗಿದೆ.

ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮಾತನಾಡಿ, “ಅಹಿಂದದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಸರಿ. ಕ್ಷೇತ್ರದಲ್ಲಿ ಮುಸ್ಲಿಮರು ಹೆಚ್ಚಿದ್ದಾರೆ, ಅವರಿಗೆ ಮೊದಲ ಆದ್ಯತೆ ಇರಬೇಕು. ಅದರಲ್ಲೂ 80 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯ ತನಕ ಸಮುದಾಯಕ್ಕೆ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ನಮಗೆ ಕೊಡಬೇಕೆಂಬ ಬೇಡಿಕೆ ಇದೆ” ಎಂದರು.

“ಅಹಿಂದದಲ್ಲಿ ಅಲ್ಪಸಂಖ್ಯಾತರಿಗೆ ಮೊದಲ ಆದ್ಯತೆ ಸಿಗಬೇಕು. ಸಮುದಾಯದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ನಾವು ಕೆಲಸ ಮಾಡಲು ಸಿದ್ಧ. ನಾನೂ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ” ಎಂದು ಹೇಳಿದ್ದಾರೆ.

ಬಿಜೆಪಿ ಮನೆಯೊಂದು, ಮೂರು ಬಾಗಿಲು: 2024ರ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಗಾಯತ್ರಿ ಸಿದ್ದೇಶ್ವರ ಸೋಲಿನ ಬಳಿಕ ದಾವಣಗೆರೆ ಬಿಜೆಪಿ ಮನೆಯೊಂದು, ಮೂರು ಬಾಗಿಲು ಆಗಿದೆ. ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರೋಧ ಬಣದ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾರೆ.

ದಾವಣಗೆರೆ ದಕ್ಷಿಣದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿದರೂ ಒಮ್ಮೆ ಸಹ ಗೆಲ್ಲದ ಬಿಜೆಪಿ ಶಾಮನೂರು ಶಿವಶಂಕರಪ್ಪ ಅನುಪಸ್ಥಿತಿಯಲ್ಲಿ ಗೆಲ್ಲುವ ಉತ್ಸಾಹದಲ್ಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಕ್ಷೇತ್ರ ಬಿಜೆಪಿಗೆ ಎಂದು ಬಿಜೆಪಿ ನಾಯಕರು ಖಚಿತಪಡಿಸಿದ್ದಾರೆ.

ಆದರೆ ಜೆಡಿಎಸ್ ಮುಖಂಡ ಅಮಾನುಲ್ಲಾ ಖಾನ್ ಮಾತನಾಡಿ, “ಹಲವು ವರ್ಷಗಳಿಂದ ಮುಸ್ಲಿಮರು ಟಿಕೆಟ್‌ಗಾಗಿ ಬೇಡಿಕೆ ಇಡುತ್ತ ಬಂದಿದ್ದಾರೆ. ನಮಗೆ ಈ ಬಾರಿ ಅವಕಾಶ ಮಾಡಿಕೊಡಬೇಕು. ಯಾರಿಗೆ ಟಿಕೆಟ್ ಕೊಡಲಾಗುತ್ತದೆಯೋ ಅವರಿಗೆ ಬೆನ್ನೆಲುಬಾಗಿ ನಿಂತು ಗೆಲ್ಲಿಸಬೇಕು” ಎಂದು ಹೇಳಿದ್ದಾರೆ.

 ಬಿಜೆಪಿ ಟಿಕೆಟ್‌ಗಾಗಿ ಜಿ.ಎಂ.ಸಿದ್ದೇಶ್ವರ್ ಬಣದಿಂದ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಶ್ರೀನಿವಾಸ್ ದಾಸಕರಿಯಪ್ಪ ಸೇರಿ ಹಲವರ‌ ಹೆಸರು ಕೇಳಿ ಬರುತ್ತಿದೆ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಣದಿಂದ ಕಳೆದ ಬಾರಿ ಸೋತಿದ್ದ ಅಜಯ್ ಕುಮಾರ್​​ಗೆ ಟಿಕೆಟ್ ಕೊಡಿ ಎಂಬ ಆಗ್ರಹ ಇದ್ದು, ಅಭ್ಯರ್ಥಿ ಘೋಷಣೆ ಮಾಡಿ ಚುನಾವಣೆ ನಾವು ನಡೆಸುತ್ತೇವೆ ಎಂದು ಎಂ.ಪಿ.ರೇಣುಕಾಚಾರ್ಯ ಘೋಷಣೆ ಮಾಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular