ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಅತ್ಯಂತ ಪವಿತ್ರವಾದ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದೆ. ಟಿಟಿಡಿ (TTD – Tirumala Tirupati Devasthanams) ನಿಯಮಗಳ ಪ್ರಕಾರ ದೇವಸ್ಥಾನದ ಆವರಣದಲ್ಲಿ ಮತ್ತು ಬೆಟ್ಟದ ಕೆಲವು ನಿರ್ಬಂಧಿತ ಪ್ರದೇಶಗಳಲ್ಲಿ ಫೋಟೋ ಅಥವಾ ವಿಡಿಯೋ ತೆಗೆಯುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನವಜೋಡಿ ವಿವಾದಕ್ಕೆ ಸಿಲುಕಿದ್ದಾರೆ.
ತಿರುವಣ್ಣಾಮಲೈನ ಶ್ರೀ ತಿರುಮಲ್ ಮತ್ತು ಗಾಯತ್ರಿ ಎಂಬ ದಂಪತಿಗಳು ಇತ್ತೀಚೆಗೆ ತಿರುಮಲದ ‘ಕಲ್ಯಾಣ ವೇದಿಕೆ’ಯಲ್ಲಿ ವಿವಾಹವಾಗಿದ್ದರು. ಮದುವೆಯ ನಂತರ, ಅವರು ಶ್ರೀವಾರಿ ದೇವಾಲಯದ ಆವರಣದಲ್ಲಿ (ಗೊಲ್ಲ ಮಂಟಪದಿಂದ ಅಖಿಲಾಂಡಂ ವಲಯದವರೆಗೆ) ಫೋಟೋ ಶೂಟ್ ಮಾಡಿಸಿಕೊಂಡಿದ್ದರು..ತಿರುಮಲದ ಪವಿತ್ರ ಶ್ರೀವಾರಿ ದೇಗುಲದ ಮುಂಭಾಗದಲ್ಲಿ ಫೋಟೋ ಶೂಟ್ ನಡೆಸಿ ವಿವಾದಕ್ಕೀಡಾಗಿದ್ದ ನವಜೋಡಿ ಈಗ ತಮ್ಮ ತಪ್ಪಿಗಾಗಿ ಕ್ಷಮೆಯಾಚಿಸಿದ್ದಾರೆ.
ದೇವಾಲಯದ ಆವರಣದಲ್ಲಿ ವೃತ್ತಿಪರ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿಯನ್ನು ಟಿಟಿಡಿ (TTD) ಕಟ್ಟುನಿಟ್ಟಾಗಿ ನಿಷೇಧಿಸಿದೆ. ಆದರೆ ಈ ಜೋಡಿಯು ಕ್ಯಾಮೆರಾಮನ್ಗಳೊಂದಿಗೆ ಪೋಸ್ ನೀಡುತ್ತಾ, ಪವಿತ್ರ ಸ್ಥಳದಲ್ಲಿ ಪರಸ್ಪರ ಮುತ್ತಿಕ್ಕುವ ಮೂಲಕ ಅತಿರೇಕವಾಗಿ ವರ್ತಿಸಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ವಿವಾದ ಬೆನ್ನಲ್ಲೇ ಈ ದಂಪತಿಗಳು ವಿಡಿಯೋ ಒಂದನ್ನು ಬಿಡುಗಡೆ ಮಾಡಿ ಕ್ಷಮೆಯಾಚಿಸಿದ್ದಾರೆ.ದೇವಸ್ಥಾನದ ಆವರಣದಲ್ಲಿ ಫೋಟೋ ತೆಗೆಯಬಾರದು ಎಂಬ ನಿಯಮ ನಮಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ.ತಪ್ಪು ತಿಳಿಯುತ್ತಿದ್ದಂತೆಯೇ ಆ ಫೋಟೋಗಳನ್ನು ತಮ್ಮ ಫೋನ್ನಿಂದ ಸಂಪೂರ್ಣವಾಗಿ ಡಿಲೀಟ್ ಮಾಡಿರುವುದಾಗಿ ತಿಳಿಸಿದ್ದಾರೆ. ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಅವರು ಟಿಟಿಡಿ ಅಧಿಕಾರಿಗಳು ಮತ್ತು ಭಕ್ತರಲ್ಲಿ ಕ್ಷಮೆ ಕೇಳಿದ್ದಾರೆ.
ಪ್ರಾಯಶ್ಚಿತ್ತದ ಭರವಸೆ: ತಾವು ಮಾಡಿದ ಈ ತಪ್ಪಿಗೆ ಪ್ರಾಯಶ್ಚಿತ್ತವಾಗಿ ‘ಶ್ರೀವಾರಿ ಸೇವೆ’ಯ ಮೂಲಕ ದೇವಸ್ಥಾನದ ಸೇವೆ ಮಾಡಲು ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ. ಇನ್ನು ಮುಂದೆ ದೇವಾಲಯದ ಸಂಪ್ರದಾಯಗಳನ್ನು ಪಾಲಿಸುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.ಈ ಘಟನೆಯ ನಂತರ ಟಿಟಿಡಿ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆಯೂ ಭಕ್ತರು ಪ್ರಶ್ನೆಗಳನ್ನು ಎತ್ತಿದ್ದಾರೆ.
ರೀಲ್ಸ್ ಮತ್ತು ಫೋಟೋ ಶೂಟ್: ಬೆಟ್ಟದ ಪವಿತ್ರ ಸ್ಥಳಗಳಲ್ಲಿ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡುವುದು ಅಥವಾ ಆಧುನಿಕ ಫೋಟೋ ಶೂಟ್ ಮಾಡುವುದು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಲವರು ದೂರಿದ್ದಾರೆ.
ಡ್ರೋನ್ ಕ್ಯಾಮೆರಾ ಬಳಕೆ: ಭದ್ರತಾ ದೃಷ್ಟಿಯಿಂದ ತಿರುಮಲದಲ್ಲಿ ಡ್ರೋನ್ ಹಾರಿಸುವುದು ನಿಷೇಧವಿದ್ದರೂ, ಕೆಲವರು ಡ್ರೋನ್ ಬಳಸಿ ದೃಶ್ಯಗಳನ್ನು ಸೆರೆಹಿಡಿಯಲು ಪ್ರಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾರೆ.
ಟಿಟಿಡಿ (TTD) ಕಠಿಣ ನಿಯಮಗಳು
ಈ ವಿವಾದಗಳ ನಂತರ ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯು ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ:
• ಮೊಬೈಲ್ ನಿಷೇಧ: ದೇವಸ್ಥಾನದ ಒಳಗೆ ಮೊಬೈಲ್ ಒಯ್ಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
• ಭದ್ರತಾ ತಪಾಸಣೆ: ಬೆಟ್ಟಕ್ಕೆ ಬರುವ ಪ್ರತಿಯೊಂದು ವಾಹನ ಮತ್ತು ವ್ಯಕ್ತಿಯನ್ನು ಕೂಲಂಕಷವಾಗಿ ತಪಾಸಣೆ ಮಾಡಲಾಗುತ್ತದೆ.
• ಕಾನೂನು ಕ್ರಮ: ನಿಯಮ ಮೀರಿ ಫೋಟೋ ಶೂಟ್ ಮಾಡಿದರೆ ಅಥವಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ.

