ನವದೆಹಲಿ: ದೇಶದಲ್ಲಿ ಮೊಬೈಲ್ ಫೋನ್ಗಳು, ಟ್ಯಾಬ್ಲೆಟ್ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಸಾಲದ (EMI) ಮೇಲೆ ಖರೀದಿಸುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆರ್ಬಿಐ (RBI) ಮಹತ್ವದ ಪ್ರಸ್ತಾವನೆಗಳನ್ನು ಮುಂದಿಟ್ಟಿದೆ.
ಹೊಸ ನಿಯಮಗಳೇನು?
ಸಾಲ ಪಡೆದವರು EMI ಪಾವತಿಸದಿದ್ದರೆ, ಕೆಲವು ಕಠಿಣ ನಿಬಂಧನೆಗಳೊಂದಿಗೆ ಆ ಸಾಧನದ ಕೆಲವು ಫೀಚರ್ಗಳನ್ನು ರಿಮೋಟ್ ಮೂಲಕ ನಿಷ್ಕ್ರಿಯಗೊಳಿಸಲು ಸಾಲದಾತರಿಗೆ (Banks/Financers) ಅನುಮತಿ ನೀಡುವ ಕುರಿತು ಆರ್ಬಿಐ ಹೊಸ ಕರಡು ನಿಯಮಗಳನ್ನು ಬಿಡುಗಡೆ ಮಾಡಿದೆ. ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ವಾಣಿಜ್ಯ ಬ್ಯಾಂಕುಗಳು – ಜವಾಬ್ದಾರಿಯುತ ವ್ಯಾಪಾರ ನಡವಳಿಕೆ) ತಿದ್ದುಪಡಿ ಆದೇಶಗಳು, 2026’ ಹೆಸರಿನ ಈ ನಿಯಮಗಳು ಅಕ್ಟೋಬರ್ 1, 2026 ರಿಂದ ಜಾರಿಗೆ ಬರುವ ಸಾಧ್ಯತೆಯಿದೆ.
ಸಾಲದ ಕಂತು ಪಾವತಿಯಾಗದೆ 90 ದಿನಗಳವರೆಗೆ ಬಾಕಿ ಉಳಿದಿದ್ದರೆ ಮಾತ್ರ ಸಾಲದಾತರು ಸಾಧನದ ಮೇಲೆ ನಿರ್ಬಂಧ ವಿಧಿಸಬಹುದು.ಸಾಲಗಾರರಿಗೆ ಮುಂಚಿತವಾಗಿ ಎಚ್ಚರಿಕೆ ನೀಡಬೇಕು. EMI ಅವಧಿ ಮುಗಿದ 60 ದಿನಗಳ ನಂತರ ಮೊದಲ ನೋಟಿಸ್ ಜಾರಿ ಮಾಡಬೇಕು, ಅದರಲ್ಲಿ 21 ದಿನಗಳ ಗಡುವು ನೀಡಬೇಕು. ನಂತರ ಮತ್ತೊಂದು ವಾರದ ಗಡುವಿನೊಂದಿಗೆ ಎರಡನೇ ನೋಟಿಸ್ ನೀಡಿದ ಬಳಿಕವೇ ಆಂಶಿಕ ನಿರ್ಬಂಧ ವಿಧಿಸಬಹುದು.
ಸಾಲದ ಒಪ್ಪಂದದಲ್ಲಿ ಗ್ರಾಹಕರ ಸ್ಪಷ್ಟ ಒಪ್ಪಿಗೆ ಇದ್ದರೆ ಮಾತ್ರ ಈ ವಿಧಾನ ಅನ್ವಯವಾಗುತ್ತದೆ.ಇಂಟರ್ನೆಟ್ ಸೇವೆಗಳು, ಇನ್ಕಮಿಂಗ್ ಕರೆಗಳು, ತುರ್ತು SOS ಫೀಚರ್ಗಳು ಮತ್ತು ಸರ್ಕಾರಿ ಎಚ್ಚರಿಕೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವಂತಿಲ್ಲ.
ದಂಡ ಮತ್ತು ಗೌಪ್ಯತೆ:
- ಗ್ರಾಹಕರು ಬಾಕಿ ಪಾವತಿಸಿದ ಒಂದು ಗಂಟೆಯೊಳಗೆ ನಿರ್ಬಂಧಗಳನ್ನು ತೆರವುಗೊಳಿಸಬೇಕು. ವಿಳಂಬವಾದರೆ ಪ್ರತಿ ಗಂಟೆಗೆ ರೂ. 250 ದಂಡ ಪಾವತಿಸಬೇಕಾಗುತ್ತದೆ.
- ಫೋನ್ ಲಾಕ್ ಆದ ಸಂದರ್ಭದಲ್ಲಿ ಬ್ಯಾಂಕುಗಳು ಅಥವಾ ಏಜೆಂಟ್ಗಳು ಗ್ರಾಹಕರ ವೈಯಕ್ತಿಕ ಡೇಟಾವನ್ನು ಪಡೆಯುವುದನ್ನು ನಿಷೇಧಿಸಲಾಗಿದೆ.
ರಿಕವರಿ ಏಜೆಂಟ್ಗಳಿಗೆ ಎಚ್ಚರಿಕೆ:
- ರಿಕವರಿ ಏಜೆಂಟ್ಗಳು ಬೆಳಗ್ಗೆ 8 ರಿಂದ ಸಂಜೆ 7 ಗಂಟೆಯೊಳಗೆ ಮಾತ್ರ ಸಂಪರ್ಕಿಸಬೇಕು.
- ಗ್ರಾಹಕರನ್ನು ಬೆದರಿಸುವುದು, ಅವಮಾನಿಸುವುದು ಅಥವಾ ಕುಟುಂಬದವರನ್ನು ವೇದನೆಗೆ ಗುರಿಪಡಿಸುವಂತಹ ಯಾವುದೇ ಕ್ರಮಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
- ದೇಶದಲ್ಲಿ 1.16 ಬಿಲಿಯನ್ಗೂ ಅಧಿಕ ಮೊಬೈಲ್ ಸಂಪರ್ಕಗಳಿದ್ದು, ಈ ಹೊಸ ನಿಯಮಗಳು ಕೋಟ್ಯಂತರ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿವೆ.

