ದುಬೈ ಎಂದರೆ ಅಲ್ಲಿನ ಐಷಾರಾಮಿ ಜೀವನಶೈಲಿ ಮತ್ತು ಅಚ್ಚರಿಗಳಿಗೆ ಹೆಸರಾದ ನಗರ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ದುಬೈನ ಶ್ರೀಮಂತಿಕೆ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಲ್ಲಿ ನೆಲೆಸಿರುವ ಕೃಷ್ಣ ಅರೋರಾ ಎಂಬ ಭಾರತೀಯ ಮೂಲದ ವ್ಯಕ್ತಿ ತಮ್ಮ ರೋಲ್ಸ್ ರಾಯ್ಸ್ ಕಾರಿನ ಇಂಧನ ಖಾಲಿಯಾದಾಗ ಮಾಡಿದ ಸಾಹಸ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಹಬೀಬಿ… ಇದು ದುಬೈ!
ಕೃಷ್ಣ ಅರೋರಾ ತಡರಾತ್ರಿ ಸಿನಿಮಾ ನೋಡಿ ತಮ್ಮ ರೋಲ್ಸ್ ರಾಯ್ಸ್ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಕಾರಿನಲ್ಲಿ ಪೆಟ್ರೋಲ್ ಕಡಿಮೆ ಇರುವುದು ಗಮನಕ್ಕೆ ಬರುತ್ತದೆ. ಈ ವೇಳೆ ಕಾರಿನಲ್ಲಿದ್ದ ಸಹಪ್ರಯಾಣಿಕರು ಪೆಟ್ರೋಲ್ ಬಂಕ್‌ಗೆ ಹೋಗಬೇಕಲ್ಲ ಎಂದು ಕೇಳಿದಾಗ, ಕೃಷ್ಣ ಅವರು ನಗುತ್ತಾ “ನಾವು ಪೆಟ್ರೋಲ್ ಬಂಕ್‌ಗೆ ಹೋಗುವುದು ಬೇಡ, ಪೆಟ್ರೋಲ್ ಬಂಕ್ ಅನ್ನೇ ಮನೆಗೆ ತರಿಸೋಣ” ಎಂದು ಹೇಳುತ್ತಾರೆ. ಇದು ಹೇಗೆ ಸಾಧ್ಯ ಎಂದು ಆಕೆ ಆಶ್ಚರ್ಯಪಟ್ಟಾಗ ಅವರು ನೀಡಿದ ಉತ್ತರ “ಹಬೀಬಿ… ಇದು ದುಬೈ”.
ಮನೆ ಬಾಗಿಲಿಗೇ ಬಂದ ಮೊಬೈಲ್ ಫ್ಯುಯೆಲ್ ಸ್ಟೇಷನ್
ಕೃಷ್ಣ ಅವರು ಹೇಳಿದಂತೆಯೇ ಮನೆಗೆ ತಲುಪಿದ ಕೆಲವೇ ಕ್ಷಣಗಳಲ್ಲಿ ಒಂದು ಇಂಧನ ತುಂಬಿದ ಟ್ರಕ್ ಅವರ ಮನೆ ಮುಂದೆ ಬಂದು ನಿಲ್ಲುತ್ತದೆ. ಮೊಬೈಲ್ ಪೆಟ್ರೋಲ್ ಬಂಕ್‌ನಂತೆ ಕಾರ್ಯನಿರ್ವಹಿಸುವ ಈ ವಾಹನವು ಅವರ ಐಷಾರಾಮಿ ರೋಲ್ಸ್ ರಾಯ್ಸ್ ಕಾರಿಗೆ ಪೆಟ್ರೋಲ್ ತುಂಬಿಸುತ್ತದೆ. ಈ ದೃಶ್ಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈಗಾಗಲೇ ಸುಮಾರು 1.9 ಕೋಟಿಗೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ.
ನೆಟ್ಟಿಗರ ಫನ್ನಿ ಕಾಮೆಂಟ್ಸ್
ಈ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. “ನಮ್ಮಲ್ಲಿ ಪೆಟ್ರೋಲ್ ಖಾಲಿಯಾದ್ರೆ ಕಾರನ್ನು ತಳ್ಳಿಕೊಂಡು ಬಂಕ್‌ಗೆ ಹೋಗಬೇಕು, ಇಲ್ಲಿ ಬಂಕ್ ನಮ್ಮ ಹಿಂದೆ ಬರುತ್ತೆ” ಎಂದು ಒಬ್ಬರು ಕಾಮೆಂಟ್ ಮಾಡಿದರೆ, “ಶ್ರೀಮಂತರ ಸಮಸ್ಯೆಗಳಿಗೆ ಪರಿಹಾರವೂ ಶ್ರೀಮಂತವಾಗಿಯೇ ಇರುತ್ತದೆ” ಎಂದು ಮತ್ತೊಬ್ಬರು ಬರೆದಿದ್ದಾರೆ. ದುಬೈನಲ್ಲಿ ಏನು ಬೇಕಾದರೂ ಸಾಧ್ಯ ಎನ್ನುವುದಕ್ಕೆ ಈ ಘಟನೆ ಒಂದು ಸಾಕ್ಷಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

