ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳೆನಗರ ಖಾಜಿ ಮೊಹಲ್ಲಾ ಕೋಟೆ ಏರಿಯಾ ಪ್ರದೇಶದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ(ಎಸ್ಐಆರ್) ಕಾರ್ಯದಲ್ಲಿ ತೊಡಗಿದ್ದ ಮತಗಟ್ಟೆ ಅಧಿಕಾರಿಯೊಬ್ಬರ ಮೇಲೆ ನಾಯಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ.
ಖಾಜಿ ಮೊಹಲ್ಲಾದ ಕೋಟೆ ಏರಿಯಾ ಮೂರನೇ ಕ್ರಾಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತಗಟ್ಟೆ ಅಧಿಕಾರಿ ರೆಹಮತ್ ಉಲ್ಲಾ ಅವರ ಕಾಲಿಗೆ ಸಾಕು ನಾಯಿ ಕಚ್ಚಿದ್ದು, ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ಮಾಹಿತಿ ತಿಳಿದ ಉಪ ತಹಶೀಲ್ದಾರ್ ಮಂಜಾನಾಯ್ಕ್ ಆಸ್ಪತ್ರೆಗೆ ತೆರಳಿ ಬಿಎಲ್ಒ ರೆಹಮತ್ ಉಲ್ಲಾ ಅವರ ಆರೋಗ್ಯ ವಿಚಾರಿಸಿದ್ದಾರೆ. ಎಸ್ಐಆರ್ ಕಾರ್ಯಕ್ಕೆ ಮನೆ ಬಾಗಿಲಿಗೆ ಬರುವ ಅಧಿಕಾರಿಗಳ ಮೇಲೆ ತಮ್ಮ ನಾಯಿಗಳು ದಾಳಿ ಮಾಡದಂತೆ ಸಾರ್ವಜನಿಕರು ನೋಡಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

