ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ತರಗತಿಯಲ್ಲಿ ಪಾಠ ಮಾಡುತ್ತಿದ್ದ ಪ್ರೊಫೆಸರ್ ಓರ್ವರು ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು ಭಯೋತ್ಪಾದಕ, ಟೆರರಿಸ್ಟ್ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಬನಶಂಕರಿಯ ರಿಂಗ್ ರೋಡ್ ನಲ್ಲಿರುವ ಪಿಇಎಸ್ ವಿಶ್ವವಿದ್ಯಾಲಯನಲ್ಲಿ ಪ್ರೊಫೆಸರ್ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿಬಂದಿದೆ. ಬನಶಂಕರಿ ರಿಂಗ್ ರೋಡ್‌ನಲ್ಲಿರುವ ಕ್ಯಾಂಪಸ್‌ನಲ್ಲಿ ಪಾಠ ಮಾಡುತ್ತಿದ್ದ ವೇಳೆ ಕೋಪಗೊಂಡ ಪ್ರೊಫೆಸರ್ ಡಾ. ಮೂರಳಿಧರ ದೇಶಪಾಂಡೆ ತರಗತಿಯಲ್ಲಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಾಠ ಮಾಡುತ್ತಿದ್ದ ವೇಳೆ ವಿದ್ಯಾರ್ಥಿಗಳು ಗಲಾಟೆ ಮಾಡುತ್ತಿದ್ದರು. ಈ ವೇಳೆ ಮುಸ್ಲಿಂ ವಿದ್ಯಾರ್ಥಿಯನ್ನು ಗದರಿದ ಪ್ರಾಧ್ಯಾಪಕ ದೇಶಪಾಂಡೆ, ನೀವೆಲ್ಲಾ ಭಯೋತ್ಪಾದಕರು, ಗಲಾಟೆ ಮಾಡಲು ನಾಚಿಕೆಯಾಗಲ್ವಾ? ಎಂದು ಬಾಯಿಗೆ ಬಂದಂತೆ ಬೈದಿದ್ದಾರೆ.
ಇದೇ ವೇಳೆ ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ತಮ್ಮ ಮೊಬೈಲ್ನಲ್ಲಿ ಘಟನೆಯನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಈ ಬಗ್ಗೆ ದೂರು ದಾಖಲಿಸಿದೆ. ಪ್ರಕರಣದ ಗಂಭೀರತೆಯನ್ನು ಅರಿತ ವಿಶ್ವವಿದ್ಯಾಲಯದ ಆಡಳಿತ ಮಂದಳಿ ತಕ್ಷಣ ಪ್ರೊಫೆಸರ್ ಅವರನ್ನು ಅಮಾನತು ಮಾಡಿದೆ.

