ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬ ಮಾತು ಸಿನಿಮಾ ಅಥವಾ ಕಾದಂಬರಿಗಳಲ್ಲಿ ಕೇಳಲು ಚೆನ್ನಾಗಿರುತ್ತದೆ. ಆದರೆ ಮದುವೆ ಎಂಬ ಸಾಮಾಜಿಕ ಬಂಧಕ್ಕೆ ಬಂದಾಗ ನಮ್ಮ ಸಮಾಜದಲ್ಲಿ ಮೊದಲು ಚರ್ಚೆಯಾಗುವುದೇ ವಯಸ್ಸಿನ ಅಂತರ ಸಾಮಾನ್ಯವಾಗಿ ಗಂಡನಿಗೂ ಹೆಂಡತಿಗೂ ಕನಿಷ್ಠ 3 ರಿಂದ 5 ವರ್ಷಗಳ ಅಂತರವಿರಬೇಕು ಎನ್ನುವುದು ಭಾರತೀಯ ಸಂಪ್ರದಾಯದ ನಂಬಿಕೆ. ಆದರೆ ಇಂದಿನ ಬದಲಾದ ಕಾಲಘಟ್ಟದಲ್ಲಿ ಈ ಲೆಕ್ಕಾಚಾರಗಳು ಬದಲಾಗುತ್ತಿವೆಯೇ? ತಿಳುವಳಿಕೆ ಮುಖ್ಯವೋ ಅಥವಾ ವಯಸ್ಸೋ? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ವೈಜ್ಞಾನಿಕ ದೃಷ್ಟಿಕೋನ: ಯಾರು ಬೇಗ ಪ್ರಬುದ್ಧರಾಗುತ್ತಾರೆ?
ವಿಜ್ಞಾನದ ಪ್ರಕಾರ, ಹುಡುಗಿಯರು ಹುಡುಗರಿಗಿಂತ ವೇಗವಾಗಿ ಮಾನಸಿಕ ಮತ್ತು ದೈಹಿಕ ಪ್ರಬುದ್ಧತೆಯನ್ನು (Maturity) ಹೊಂದುತ್ತಾರೆ.
ಹಾರ್ಮೋನ್ ಬದಲಾವಣೆ: ಹುಡುಗಿಯರಲ್ಲಿ 7 ರಿಂದ 13 ವರ್ಷಗಳ ನಡುವೆ ಹಾರ್ಮೋನ್ ಬದಲಾವಣೆಗಳಾದರೆ, ಹುಡುಗರಲ್ಲಿ ಅದು 9 ರಿಂದ 15 ವರ್ಷಗಳ ನಡುವೆ ಸಂಭವಿಸುತ್ತದೆ.
ಯೋಚನಾ ಶಕ್ತಿ: ಈ ಕಾರಣಕ್ಕಾಗಿಯೇ ಮಹಿಳೆಯರು ಪುರುಷರಿಗಿಂತ ಸ್ವಲ್ಪ ಮೊದಲೇ ಜವಾಬ್ದಾರಿಯುತವಾಗಿ ಯೋಚಿಸಲು ಪ್ರಾರಂಭಿಸುತ್ತಾರೆ. ಆದ್ದರಿಂದಲೇ ಪುರುಷರು ಸ್ವಲ್ಪ ದೊಡ್ಡ ವಯಸ್ಸಿನವರಾಗಿದ್ದರೆ ಸಂಬಂಧದ ಸಮತೋಲನ ಚೆನ್ನಾಗಿರುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಚಾಣಕ್ಯ ನೀತಿ ಮತ್ತು ಸಂಪ್ರದಾಯ ಏನು ಹೇಳುತ್ತದೆ?
ಪ್ರಾಚೀನ ಆಚಾರ್ಯ ಚಾಣಕ್ಯರ ಪ್ರಕಾರ ದಂಪತಿಗಳ ನಡುವೆ 3 ರಿಂದ 5 ವರ್ಷಗಳ ಅಂತರವಿರುವುದು ಶ್ರೇಷ್ಠ.
ಸಮಾನ ಅಭಿರುಚಿ: ಕಡಿಮೆ ಅಂತರವಿದ್ದರೆ ಇಬ್ಬರ ಆಲೋಚನೆಗಳು ಮತ್ತು ಜೀವನಶೈಲಿ ಒಂದೇ ತೆರನಾಗಿರುತ್ತದೆ.
ಭಿನ್ನಾಭಿಪ್ರಾಯಗಳ ಇಳಿಕೆ: ವಯಸ್ಸಿನ ಅಂತರ ತುಂಬಾ ಹೆಚ್ಚಾದಾಗ (ಉದಾಹರಣೆಗೆ 10-15 ವರ್ಷ), ಒಬ್ಬರ ಅನುಭವಕ್ಕೂ ಇನ್ನೊಬ್ಬರ ಆಶಯಕ್ಕೂ ಹೊಂದಾಣಿಕೆಯಾಗದೆ ಜಗಳಗಳು ಶುರುವಾಗಬಹುದು.
ವಯಸ್ಸು ಕೇವಲ ಒಂದು ಸಂಖ್ಯೆಯೇ?
ಇತ್ತೀಚಿನ ಪ್ರೇಮ ವಿವಾಹಗಳಲ್ಲಿ ವಯಸ್ಸಿನ ಅಂತರವನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದಕ್ಕೆ ಸೆಲೆಬ್ರಿಟಿಗಳೇ ದೊಡ್ಡ ಉದಾಹರಣೆ:
ನಿಕೊ ಜೋನ್ಸ್ – ಪ್ರಿಯಾಂಕಾ ಚೋಪ್ರಾ: ಇಲ್ಲಿ ಹೆಂಡತಿಗಿಂತ ಗಂಡ ಸುಮಾರು 10 ವರ್ಷ ಚಿಕ್ಕವನು.
ಶಾಹಿದ್ ಕಪೂರ್ – ಮೀರಾ ರಜಪೂತ್: ಇಲ್ಲಿ ಗಂಡನಿಗೂ ಹೆಂಡತಿಗೂ 15 ವರ್ಷಗಳ ಅಂತರವಿದೆ.
ಈ ಜೋಡಿಗಳು ಯಶಸ್ವಿ ಜೀವನ ನಡೆಸುತ್ತಿರುವುದು ಏನನ್ನು ಸೂಚಿಸುತ್ತದೆ ಎಂದರೆ, ಮದುವೆಯಲ್ಲಿ ಪರಸ್ಪರ ಗೌರವ, ನಂಬಿಕೆ ಮತ್ತು ಭಾವನಾತ್ಮಕ ಸಂಪರ್ಕ ಇದ್ದರೆ ವಯಸ್ಸು ಕೇವಲ ಒಂದು ಅಂಕಿ ಮಾತ್ರ.

