ಬೆಂಗಳೂರು: ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ ಇಲ್ಲದೆ ಸರಬರಾಜು ನಿಯಮಿತವಾಗಿ ನಡೆಯುತ್ತಿದೆ. ಕೆಲವೆಡೆ ಜನರು ಪ್ಯಾನಿಕ್ನಿಂದ ಅಗತ್ಯಕ್ಕಿಂತ ಹೆಚ್ಚು ಬುಕ್ಕಿಂಗ್ ಮಾಡುತ್ತಿರುವುದರಿಂದ ಗೊಂದಲ ಉಂಟಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಒಂದು ದಿನಕ್ಕೆ 850 ಮೆಟ್ರಿಕ್ ಟನ್ ಗ್ಯಾಸ್ ಪೂರೈಕೆ ಆಗುತ್ತಿದ್ದು, ಬಳಕೆಯ ಪ್ರಮಾಣ ಅಧಿಕವಾಗಿದೆ. ಈ ಸಂದರ್ಭದಲ್ಲಿ ಮಿತವ್ಯಯವಾಗಿ ಬಳಸಲು ಗ್ರಾಹಕರಲ್ಲಿ ಮನವಿ ಮಾಡುತ್ತೇವೆ. ರಾಜ್ಯದಲ್ಲಿ ಎಲ್ಪಿಜಿ ವಿತರಣೆ ಪ್ರತಿ ರಾಜ್ಯದ ಬಳಕೆ (consumption) ಆಧಾರದ ಮೇಲೆ ಕೇಂದ್ರದಿಂದ ನಿರ್ಧರಿಸಲಾಗುತ್ತದೆ. ಸಿಲಿಂಡರ್ ಸರಬರಾಜು ಆಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಮತ್ತು ಸಂಬಂಧಿಸಿದ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿದ್ದಲ್ಲಿ ರಾಜ್ಯದ ಅಗತ್ಯವನ್ನು ತಿಳಿಸಿ ಪತ್ರಗಳ ಮೂಲಕ ಗಮನಕ್ಕೆ ತರುತ್ತಿದ್ದಾರೆ. ಅತ್ಯಾವಶ್ಯಕ ಸೇವೆಗಳಾದ ಆಸ್ಪತ್ರೆಗಳು ಸೇರಿದಂತೆ ಹೋಟೆಲ್ ಹಾಗೂ ವ್ಯಾಪಾರಿಕ ಬಳಕೆದಾರರಿಗೆ ಯಾವುದೇ ರೀತಿಯ ಸರಬರಾಜು ಸಮಸ್ಯೆ ಇಲ್ಲ. ಅವರಿಗೆ ಅಗತ್ಯವಿರುವಷ್ಟು ಸಿಲಿಂಡರ್ ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ 25–30 ದಿನಗಳಿಗೆ ಒಂದು ಸಿಲಿಂಡರ್ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು 45 ದಿನಗಳಿಗೆ ಒಂದು ಸಿಲಿಂಡರ್ ಬಳಕೆಯಾಗುತ್ತದೆ. ಇದಕ್ಕೆ ಅನುಗುಣವಾಗಿ ಸರಬರಾಜು ನಡೆಯುತ್ತಿದೆ. ಜನರು ಪ್ಯಾನಿಕ್ ಆಗಬಾರದು, ಅಗತ್ಯಕ್ಕಿಂತ ಹೆಚ್ಚು ಸಿಲಿಂಡರ್ ಬುಕ್ ಮಾಡಬಾರದು ಹಾಗೂ ಸ್ಟಾಕ್ ಇಟ್ಟುಕೊಳ್ಳಬಾರದು. ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದರೆ ತಕ್ಷಣ ಸಂಬಂಧಿತ ಕಂಪನಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಜನರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.

