HomeKarnatakaಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಇಷ್ಟು ವಾರ್ಷಿಕ ಆದಾಯ ಮಿತಿ ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿ...

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಇಷ್ಟು ವಾರ್ಷಿಕ ಆದಾಯ ಮಿತಿ ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿ ಮುಂದುವರಿಸಲು ಆದೇಶ

ಬೆಂಗಳೂರು- ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಪರಿಶೀಲನೆಯ ನಂತರ ₹32,000 ದಿಂದ ₹1,20,000 ಒಳಗಿನ ವಾರ್ಷಿಕ ಆದಾಯ ಮಿತಿ ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿಗಳನ್ನು ಮುಂದುವರೆಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು, ವಿವಿಧ ಸಾಮಾಜಿಕ ಪಿಂಚಣಿಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಇತ್ಯಾದಿಗಳಿಗೆ 32 ಸಾವಿರ ರೂ. ಆದಾಯ ಮಿತಿ ಇತ್ತು. ಬಹಳ ದಿನಗಳಿಂದ ಇದುವೇ ಆದಾಯ ಮಿತಿಯಿದ್ದ ಕಾರಣ ಲಕ್ಷಾಂತರ ಜನರು ಪಿಂಚಣಿ ಸೌಲಭ್ಯದಿಂದ ಹೊರಗೆ ಉಳಿದಿದ್ದರು. ಅದನ್ನು ₹1,20,000 ಗಳಿಗೆ ಏರಿಕೆ ಮಾಡುವ ಮೂಲಕ ಬಹುಕಾಲದ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಎಂದು ತಿಳಿಸಿದರು.

ಪರಿಶೀಲನೆ ಹೇಗೆ ನಡೆಯಿತು?

*ವಿವರಣೆ :* ಕುಟುಂಬ ದತ್ತಾಂಶದಿಂದ ಪಡೆದ ಮಾಹಿತಿಗಳನ್ನು ರಾಜ್ಯದಲ್ಲಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿಯೊಂದಿಗೆ ಸಂಯೋಜಿಸಿದಾಗ 23,14,544 ಫಲಾನುಭವಿಗಳು ಸಂದೇಹಾಸ್ಪದ ಎಂದು ಕಂಡುಬಂದಿದ್ದು, ಈ ಫಲಾನುಭವಿಗಳ ಭೌತಿಕ ಪರಿಶೀಲನೆಗಾಗಿ ಸಂಯೋಜನೆ ಮೊಬೈಲ್‌ ಆ್ಯಪ್ ಸಿದ್ಧಪಡಿಸಿ ಪರಿಶೀಲನೆ ನಡೆಸಲಾಗಿತ್ತು. ಈ ಸಮಯದಲ್ಲಿ ದಾಖಲಾತಿಗಳನ್ನು ಹಾಜರುಪಡಿಸದ, ನೀಡಿದ ವಿಳಾಸದಲ್ಲಿ ವಾಸವಿಲ್ಲದಿದ್ದ ಮತ್ತು ಆದಾಯ ದೃಢೀಕರಣ ಪತ್ರ ಹಾಜರುಪಡಿಸದಿದ್ದ 18,06,032 ಮಂದಿಯ ಪಿಂಚಣಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಮ ಆಡಳಿತ ಅಧಿಕಾರಿಗಳು ಸಂಯೋಜನೆ ಮೊಬೈಲ್‌ ಆ್ಯಪ್ ಮೂಲಕ ಪರಿಶೀಲಿಸಿದ ನಂತರ ಸಂಬಂಧಪಟ್ಟ ತಾಲೂಕು ತಹಶೀಲ್ದಾರರಿಂದ ನಿಯಮಾನುಸಾರ ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೀಡಲು ನಿರ್ದೇಶನ ನೀಡಲಾಗಿದೆ. ಆದರೆ, 23,14,544 ಸಂದೇಹಾಸ್ಪದ ಫಲಾನುಭವಿಗಳ ಭೌತಿಕ ಪರಿಶೀಲನೆ ಸಮಯದಲ್ಲಿ ಆದಾಯವು ₹32,000 ಕ್ಕಿಂತ ಹೆಚ್ಚಿರುವುದು ಕಂಡುಬಂದಿರುತ್ತದೆ.

ಆದಾಯ ಮಿತಿ ಪರಿಷ್ಕರಣೆ ನಿರ್ಧಾರ

23,14,544 ಮಂದಿಯ ಪೈಕಿ ₹32,000ಕ್ಕಿಂತ ಹೆಚ್ಚು ಹಾಗೂ ₹1,20,000ಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವಂತಹ ಫಲಾನುಭವಿಗಳ ಪಿಂಚಣಿಯನ್ನು ಮುಂದುವರೆಸುವಂತೆ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರು ಸೂಚಿಸಿದ್ದರು.

ಅದರಂತೆ 23,14,544 ಮಂದಿಯ ಪೈಕಿ ಪರಿಶೀಲನೆಯ ನಂತರ ₹32,000ಕ್ಕಿಂತ ಹೆಚ್ಚು ಹಾಗೂ ₹1,20,000 ಒಳಗಿನ ವಾರ್ಷಿಕ ಆದಾಯ ಮಿತಿಯನ್ನು ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿಗಳನ್ನು ಮುಂದುವರಿಸಲು ಕಂದಾಯ ಇಲಾಖೆಯು ಆದೇಶಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular