ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಜೆ ಪಾರ್ಕ್, ಕೆರೆಗಳಲ್ಲಿ ವಾಕಿಂಗ್ ಮಾಡುವ ಜನರಿಗೆ ಮಾಹಿತಿಯೊಂದಿದೆ. ಡಿಸೆಂಬರ್ 31ರ ಸಂಜೆ 6 ಗಂಟೆಗೆ ನಿಮ್ಮ ವಾಕಿಂಗ್ ಮುಗಿಸಿಕೊಳ್ಳಬೇಕಿದೆ. ಈ ಕುರಿತು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆದೇಶವನ್ನು ಹೊರಡಿಸಿದೆ.
ಅಪರ ಆಯುಕ್ತರು (ಅಭಿವೃದ್ಧಿ) ಬೆಂಗಳೂರು ಕೇಂದ್ರ ನಗರ ಪಾಲಿಕೆ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಪೊಲೀಸ್ ಇಲಾಖೆಯ ಜೊತೆ ಸಮನ್ವಯದೊಂದಿಗೆ ಪಾಲಿಕೆ ಈ ನಿಯಮ ಜಾರಿಗೊಳಿಸಿದ್ದು, ಜನರು ಪಾಲಿಕೆಯ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಆದೇಶದ ವಿವರ: ಅಪರ ಆಯುಕ್ತ (ಅಭಿವೃದ್ಧಿ)ರವರ ಕಛೇರಿ ಈ ಕುರಿತು ಆದೇಶಿಸಿದದೆ. ಈ ಆದೇಶ ದಿನಾಂಕ 31-12-2025ರ ಸಂಜೆ 6 ಘಂಟೆ ನಂತರ ಪಾಲಿಕೆಗೆ ಸೇರಿದ ಉದ್ಯಾನವನಗಳು ಹಾಗೂ ಕೆರೆಗಳು, ಪ್ರವೇಶ ನಿರ್ಬಂಧಿಸುವ ಕುರಿತು ಎಂಬ ವಿಷಯ ಒಳಗೊಂಡಿದೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, 2026ನೇ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ, ಈ ವರ್ಷದ ಕೊನೆಯ ದಿನವಾದ 31-12-2025ರ ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಒಟ್ಟಾಗಿ ಸೇರುವ ಸಾಧ್ಯತೆ ಇರುತ್ತದೆ.
ಇದರಿಂದಾಗಿ ಯಾವುದೇ ಅಹಿತಕರ ಘಟನೆಗಳು ಹಾಗೂ ಸಾರ್ವಜನಿಕ ಶಾಂತಿ ಭಂಗವಾಗುವ ಸಂಭವವಿರುವುದರಿಂದ, ಸಾರ್ವಜನಿಕ ಸುರಕ್ಷಯಿಂದಾಗಿ, ಮುಂಜಾಗ್ರತಾ ಕ್ರಮವಾಗಿ ದಿನಾಂಕ 31-12-2025 ರಂದು ಸಂಜೆ 6 ಗಂಟೆಯ ನಂತರ ಪಾಲಿಕೆಗೆ ಸೇರಿದ ಎಲ್ಲಾ ಉದ್ಯಾನವನಗಳು ಮತ್ತು ಕೆರೆಗಳು, ಪವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಈ ಕುರಿತು ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಿ, ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ ಎಂದು ಕಚೇರಿಗೆ ಆಂತರಿಕ ಟಿಪ್ಪಣಿಯನ್ನು ಹೊರಡಿಸಲಾಗಿದೆ.
ಸಾಮಾನ್ಯವಾಗಿ ಬೆಂಗಳೂರು ನಗರದಲ್ಲಿ ರಾತ್ರಿ 8, 9 ಗಂಟೆಯ ತನಕ ಪಾರ್ಕ್, ಕೆರೆಗಳಲ್ಲಿ ಓಡಾಡಲು ಅನುಮತಿ ಇದೆ. ಆದ್ದರಿಂದ ಸಂಜೆಯ ಸಮಯ ಸಹ ನೂರಾರು ಜನರು ಪಾರ್ಕ್‌ಗಳಲ್ಲಿ ವಾಯು ವಿಹಾರ ಮಾಡುತ್ತಾರೆ. ಆದರೆ ಡಿಸೆಂಬರ್ 31ರಂದು ಬೇಗನೇ ವಾಕಿಂಗ್ ಮುಗಿಸಿಕೊಳ್ಳಬೇಕಿದೆ.
ಬೆಂಗಳೂರಿನಲ್ಲಿ ಬಿಗಿ ಭದ್ರತೆ: ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬೆಂಗಳೂರು ಪೊಲೀಸರು ಈಗಾಗಲೇ ನಗರದ ಪ್ರಮುಖ ರಸ್ತೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಬೆಂಗಳೂರು ನಗರ ಸಂಚಾರಿ ಪೊಲೀಸರು ಸಹ ನಗರದಲ್ಲಿ ಡಿಸೆಂಬರ್ 31ರಂದು ರಾತ್ರಿಯ ಬಳಿಕ ಫ್ಲೈ ಓವರ್‌ಗಳ ಮೇಲೆ ಸಂಚಾರವನ್ನು ನಿರ್ಬಂಧಿಸಲಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್ ತಪಾಸಣೆಯನ್ನು ನಡೆಸಲಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ ಶನಿವಾರ ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆ ಸಿದ್ಧತೆ ಕುರಿತು ಪೊಲೀಸ್ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಲಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಈಗಾಗಲೇ ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ಡ್ರಿಂಗ್ ಅಂಡ್ ಡ್ರೈವ್ ತಪಾಸಣೆ ಕೈಗೊಂಡಿದ್ದಾರೆ. ನಗರದ ಪ್ರಮುಖ ಜಂಕ್ಷನ್‌ಗಳು ಮತ್ತು ವೃತ್ತಗಳಲ್ಲಿ ರಾತ್ರಿ ವೇಳೆ ಪರಿಶೀಲನೆ ನಡೆಸಲಾಗುತ್ತಿದೆ.
ಒಂದು ವಾರದಿಂದಲೂ ಬೆಂಗಳೂರಲ್ಲಿ ನಿರಂತರವಾಗಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆಗಳು ನಡೆಯುತ್ತಿದ್ದು, ಮುಂದಿನ ವಾರವೂ ಮುಂದುವರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಡಿಸೆಂಬರ್ 31ರಂದು ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

