ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪೇಯ್ಡ್ ಸ್ಮಾರ್ಟ್ ಪಾರ್ಕಿಂಗ್ ಜಾರಿ ಪ್ರಕ್ರಿಯೆ ಚುರುಕಾಗಿದೆ. ಜಯನಗರದಲ್ಲಿ ಶೀಘ್ರವೇ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿ ಆಗುವ ಸಾಧ್ಯತೆ ಇದೆ.
ದಕ್ಷಿಣ ಪಾಲಿಕೆ ವ್ಯಾಪ್ತಿಯ ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ 42 ರಸ್ತೆಗಳನ್ನು ಗುರುತಿಸಲಾಗಿದೆ. 31.65 ಕಿ.ಮೀ. ರಸ್ತೆಯ ವಿವಿಧೆಡೆ ವಾಹನಗಳ ಪಾರ್ಕಿಂಗ್ ಸ್ಥಳ ನಿಗದಿಯಾಗಿದೆ. ಒಟ್ಟು 914 ಕಾರ್ ಗಳು ಮತ್ತು 3835 ದ್ವಿಚಕ್ರವಾಹನಗಳ ನಿಲುಗಡೆಗೆ ಅವಕಾಶವಿದೆ.
ಪಾರ್ಕಿಂಗ್ ಶುಲ್ಕ ಸಂಗ್ರಹಿಸುವವರು ಪಾಯಿಂಟ್ ಆಫ್ ಸೇಲ್ ಮಷೀನ್ ಹೊಂದಿರುತ್ತಾರೆ. ಮೆಟ್ರೋಲ್ ನಿಲ್ದಾಣ ಪಾರ್ಕಿಂಗ್, ಮಾಲ್ ಗಳ ಮಾದರಿಯಲ್ಲೇ ವಾಹನಗಳ ಪ್ರವೇಶ ಸಮಯ ವಿವರ ನಮೂದಿಸಿರುವ ಚೀಟಿ ನೀಡಲಾಗುವುದು. ಎಲ್ಇಡಿ ಫಲಕ ರೋಡ್ ಮಾರ್ಕಿಂಗ್ ಸೇರಿದಂತೆ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು. ಪಾರ್ಕಿನ ಸ್ಥಳಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು ಇರುತ್ತದೆ.
ನಿಗದಿಪಡಿಸಿದ ಪಾರ್ಕಿಂಗ್ ಸ್ಥಳ ಹೊರತಾಗಿ ಬೇರೆ ಕಡೆ ವಾಹನ ನಿಲ್ಲಿಸಿದಲ್ಲಿ ವಾಹನಗಳನ್ನು ಟೋಯಿಂಗ್ ಮಾಡಲಾಗುವುದು. ಪಾರ್ಕಿಂಗ್ ಗುತ್ತಿಗೆ ಪಡೆದುಕೊಳ್ಳುವ ಸಂಸ್ಥೆಗಳೇ ವಾಹನಗಳ ಟೋಯಿಂಗ್ ಮಾಡಲಿವೆ. ದ್ವಿಚಕ್ರ ವಾಹನಗಳ ಪಾರ್ಕಿಂಗ್ ಗೆ ಗಂಟೆಗೆ 15, ಕಾರ್ ಗಳಿಗೆ 30 ರೂ., ದ್ವಿಚಕ್ರ ವಾಹನಗಳಿಗೆ ದಿನದ ಪಾಸ್ 75 ರೂ. ಮತ್ತು ತಿಂಗಳ ಪಾಸ್ 150 ರೂ., ಕಾರ್ ಗಳಿಗೆ ದಿನದ ಪಾಸ್ 1500 ರೂ. ಮತ್ತು ಮಾಸಿಕ ಪಾಸ್ 3000 ರೂ. ನಿಗದಿಪಡಿಸಲಾಗಿದೆ.

