ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಾಂಬ್ ಸ್ಫೋಟ ಪ್ರಕರಣದ ಕೈದಿಗಳು ಜೈಲು ಸಿಬ್ಬಂದಿ, ವಾರ್ಡರ್ ಜೊತೆ ವಾಗ್ವಾದ ನಡೆಸಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಬಾಂಬ್ ಸ್ಫೋಟದ ಕೈದಿಗಳು ಧರ್ಮದ ಪರ ಘೋಷಣೆಗಳನ್ನು ಕೂಗಿ ಪುಂಡಾಟ ನಡೆಸಿದ್ದಾರೆ. ಜೈಲಿನ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣ ವಾಗಿತ್ತು. ಕಳೆದ ಮೂರು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಶಂಕಿತ ಉಗ್ರ ಕೈದಿಗಳು ಜೈಲು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಆದರೆ, ಅವರು ನಿಯಮ ಉಲ್ಲಂಘಿಸಿ ಬೇರೆ ಕೈದಿಯ ಹೆಸರಿನಲ್ಲಿ ಆಸ್ಪತ್ರೆಗೆ ದಾಖಲಾಗಲು ಯತ್ನಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ಜೈಲು ವಾರ್ಡರ್ ದಾಖಲೆಗಳನ್ನು ಪರಿಶೀಲಿಸಿದಾಗ ಇಬ್ಬರು ಕೈದಿಗಳ ಗುರುತು ಪತ್ತೆಯಾಗಿದೆ. ಬೇರೆ ಕೈದಿ ಹೆಸರಿನಲ್ಲಿ ಯಾಕೆ ಬಂದಿದ್ದೀರಿ ಎಂದು ವಾರ್ಡರ್ ಪ್ರಶ್ನಿಸಿದಾಗ, ಉಗ್ರರು ಮತ್ತು ವಾರ್ಡರ್ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ವಾರ್ಡರ್ ಪ್ರಶ್ನಿಸುತ್ತಿದ್ದಂತೆ ಜೈಲಿನಲ್ಲಿದ್ದ ಇತರ ಬಾಂಬ್ ಸ್ಫೋಟ ಪ್ರಕರಣದ 50ಕ್ಕೂ ಹೆಚ್ಚು ಉಗ್ರ ಕೈದಿಗಳು ತಕ್ಷಣ ಒಂದೆಡೆ ಜಮಾವಣೆಗೊಂಡಿದ್ದಾರೆ. ವಾರ್ಡರ್ ಕ್ರಮವನ್ನು ವಿರೋಧಿಸಿದ ಕೈದಿಗಳ ಗುಂಪು, ಜೈಲಿನೊಳಗೇ ಒಂದು ಧರ್ಮದ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ, ಕರ್ತವ್ಯದಲ್ಲಿದ್ದ ಜೈಲು ವಾರ್ಡರ್ ಮೇಲೆ ಹಲ್ಲೆ ಮಾಡಲು ಸಹ ಕೈದಿಗಳು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಎಚ್ಚೆತ್ತ ಜೈಲಿನ ಹಿರಿಯ ಅಧಿಕಾರಿಗಳು ಮತ್ತು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಕೈದಿಗಳನ್ನು ಮನವೊಲಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

