ದಾವಣಗೆರೆ: ಇಂದು ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಬಿರುಸಿನಿಂದ ಸಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಹಾವು-ಏಣಿ ಆಟ ಶುರುವಾಗಿದೆ.
ದಾವಣಗೆರೆ ಮತ ಎಣಿಕೆಯಲ್ಲಿ ಆರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಮುನ್ನಡೆಯಲ್ಲಿದ್ದರು. ಆದರೆ ಆ ಬಳಿಕ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಮುನ್ನಡೆ ಸಾಧಿಸಿದರು. ಈಗ ಏಳನೇ ಸುತ್ತಿನ ಮತ ಎಣಿಕೆಯಲ್ಲಿ ಮತ್ತೆ ಕಾಂಗ್ರೆಸ್ ನ ಸಮರ್ಥ ಶಾಮನೂರು ಮುನ್ನಡೆಯಲ್ಲಿದ್ದಾರೆ.
ದಾವಣಗೆರೆಯಲ್ಲಿ ಕಾಂಗ್ರೆಸ್ ಗೆ ಲೀಡ್ ಕಡಿಮೆಯಾಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ್, ದಾವಣಗೆರೆಯ ಲೀಡ್ ಬಗ್ಗೆ ಈಗಲೇ ಏನೂ ಹೇಳಲಾಗದು. ಸದ್ಯದ ಮಾಹಿತಿ ಪ್ರಕಾರ ಸಮರ್ಥ ಶಾಮನೂರು ಮುನ್ನಡೆಯಲ್ಲಿದ್ದಾರೆ ಎಂದರು.
ನಮಗೆ ಬಂದಿರುವ ಮಾಹಿತಿ ಪ್ರಕಾರ ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಹಾಗಾಗಿ ನಮಗೆ ವಿಶ್ವಾಸವಿದೆ. ಫಲಿತಾಂಶದ ಬಗ್ಗೆ ಕಾದುನೋಡೋಣ ಎಂದು ಹೇಳಿದ್ದಾರೆ.

