HomeLatest NewsParameshwara ಅಧ್ಯಕ್ಷತೆಯಲ್ಲಿ ಕಂದಾಯ ಇಲಾಖೆಯ ಅಭಿವೃದ್ಧಿ ಪ್ರಾಧಿಕಾರಗಳ ಪ್ರಗತಿ ಪರಿಶೀಲನೆ

Parameshwara ಅಧ್ಯಕ್ಷತೆಯಲ್ಲಿ ಕಂದಾಯ ಇಲಾಖೆಯ ಅಭಿವೃದ್ಧಿ ಪ್ರಾಧಿಕಾರಗಳ ಪ್ರಗತಿ ಪರಿಶೀಲನೆ

ಬೆಂಗಳೂರು- ಇಂದು ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿವಿಧ ಅಭಿವೃದ್ಧಿ ಪ್ರಾಧಿಕಾರಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು.

ಕೂಡಲಸಂಗಮ ಮಂಡಳಿಗೆ ತರಾಟೆ

ಈ ವೇಳೆ, ಕಳೆದ 35 ವರ್ಷ ಕಳೆದರೂ ಲೆಕ್ಕ ಪರಿಶೋಧ ಮಾಡಿಸದಿರುವುದಕ್ಕೆ ಕೂಡಲ‌ಸಂಗಮ ಮಂಡಳಿಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಬಳಿಕ, ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯೋಜನೆಯ ಪ್ಲಾನ್ ಸಿದ್ಧಪಡಿಸಿದ ಬಳಿಕ ಮೂಲ ಅಂದಾಜು ವೆಚ್ಚದ ಪರಿಷ್ಕರಣೆ ಮಾಡಿಸಿ, ಜಸ್ಟಿಫಿಕೇಶನ್ ನೀಡಿ ಮಂಡಳಿಯು ಅನುಮೋದನೆ ನೀಡಬೇಕು. ಬಳಿಕ ಮುಂದಿನ ತೀರ್ಮಾನ ಸರ್ಕಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಕ್ಕಸಂಗಮದಲ್ಲಿ ಕಲ್ಯಾಣ ಮಂಟಪ, ವೇದ ಪಾಠಶಾಲೆ ಸೇರಿದಂತೆ ಇನ್ನಿತರೆ ಅಭಿವೃದ್ಧಿಗೆ ₹24.98 ಕೋಟಿ ಅನುದಾನ ಕೇಳಲಾಗಿದೆ. ಈ ಬಗ್ಗೆಯೂ ಕ್ರಮ ವಹಿಸಲಾಗುವುದು ಎಂದರು.

ಬಸವ ಕಲ್ಯಾಣ ಮಂಡಳಿ ಕಾಮಗಾರಿ ವಿಳಂಬ

ಬಸವ ಕಲ್ಯಾಣ ಮಂಡಳಿ 2005ರಲ್ಲಿ ಜಾರಿಗೆ ಬಂದಿದೆ. 2023ರವರೆಗೆ ಯಾವುದೇ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗಿಲ್ಲ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹744 ಕೋಟಿ ಹಣವನ್ನು ಮಂಜೂರು ಮಾಡಿ ಸಚಿವ ಸಂಪುಟ ಅನುಮೋದನೆ ನೀಡಿತು. ಇದರಲ್ಲಿ ₹480 ಕೋಟಿ ಖರ್ಚು ಮಾಡಲಾಗಿದೆ. 17 ಸ್ಮಾರಕಗಳ ಕಾಮಗಾರಿ ಶೀಘ್ರದಲ್ಲಿ ಮುಗಿಸಬೇಕು ಎಂದು ಸೂಚಿಸಿದರು.

ಮುಂದುವರೆದು, ಬಸವ ಕಲ್ಯಾಣಕ್ಕೆ ಮುಖ್ಯಮಂತ್ರಿಯವರೊಂದಿಗೆ ಭೇಟಿ ನೀಡಿದಾಗ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಲಾಗಿತ್ತು. ಈಗ ಮತ್ತೆ ಹೆಚ್ಚಿನ ಕಾಲಾವಕಾಶ ಕೇಳುತ್ತಿದ್ದೀರಿ. ಇದು ಸರಿಯಲ್ಲ.‌ ಎಲ್ಲ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲು ಸಿದ್ಧಪಡಿಸಬೇಕು ಎಂದು ಬೀದರ್ ಜಿಲ್ಲಾಧಿಕಾರಿಗಳಿಗೆ ಡಿಸಿಎಂ ಸ್ಪಷ್ಟ ನಿರ್ದೇಶನ ನೀಡಿದರು.

ದೊಡ್ಡ ಮೊತ್ತದ ಕಾಮಗಾರಿಗಳನ್ನು ಕೈಗೊಂಡಿರುವುದರಿಂದ ಎಲ್ಲ ಹಂತದಲ್ಲಿಯೂ ಪರಿಶೀಲನೆ ನಡೆಸಬೇಕು. ಈವರೆಗೆ ನೀವು ಪರಿಶೀಲಿಸಿರುವ ವೆಚ್ಚಗಳ ಕುರಿತ ಮಾಹಿತಿಯನ್ನು ಲೆಕ್ಕ ಪರಿಶೋಧ‌ ಮಾಡಿಸಬೇಕು. ಕಾಮಗಾರಿಯ ಫಿನಿಶಿಂಗ್ ಸರಿಯಾಗಿ ಆಗುತ್ತಿಲ್ಲ.‌ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸಿ ಗುತ್ತಿಗೆದಾರರಿಗೆ ಅಗತ್ಯ ಸೂಚನೆ ನೀಡಬೇಕು ಎಂದು ತಿಳಿಸಿದರು.

ಬನವಾಸಿ ಮತ್ತು ಬಸವನ ಬಾಗೇವಾಡಿ ಅಭಿವೃದ್ಧಿ

ಬನವಾಸಿ ಅಭಿವೃದ್ಧಿಗೆ ಸಂಬಂಧಿಸಿದಂತೆ ₹50 ಕೋಟಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಮಂಡಳಿಯ ಅನುಮೋದನೆ ಬಳಿಕ, ಪ್ರಸ್ತಾವನೆಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು ಎಂದರು.

ಯಾವುದೇ ರೀತಿಯ ಕಾಮಗಾರಿಗೆ ಹಣ ಖರ್ಚು ಮಾಡಲು ಅನುಮತಿ ಪಡೆಯಬೇಕಲ್ಲವೇ? ಇದು ಕಾಣಿಸುತ್ತಿಲ್ಲ. ₹2.18 ಕೋಟಿ ಖರ್ಚಾಗಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಬೇಕು.‌ ಮುಂದೆ ಕೈಗೊಳ್ಳಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದರು.

ಸಭೆಯಲ್ಲಿ ಭಾಗವಹಿಸಿದ ಗಣ್ಯರು

ಸಚಿವರಾದ ಎಂ.ಬಿ.ಪಾಟೀಲ್ ಅವರು, ಬಸವನ ಬಾಗೇವಾಡಿ ಶಾಸಕರಾದ ಮಾಜಿ ಸಚಿವ ಶಿವಾನಂದ ಪಾಟೀಲ್ ಅವರು, ಬ್ಯಾಡಗಿ ಶಾಸಕರಾದ ಬಸವರಾಜ್ ಶಿವಣ್ಣನವರ್, ಶಿಗ್ಗಾವಿ ಶಾಸಕ ಯಾಸೀರ್ ಖಾನ್ ಪಠಾಣ್, ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್, ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರೀಯಾ ಹಾಗೂ ಅಭಿವೃದ್ಧಿ ಪ್ರಾಧಿಕಾರಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular