ಮಧ್ಯಪ್ರದೇಶದ ಉಜ್ಜೈನಿಯ ಖಾರ್ಚೋಡ್ ಪಟ್ಟಣದಲ್ಲಿ 18 ವರ್ಷದ ಯುವತಿಯೊಬ್ಬಳು ದಲಿತ ಯುವಕನನ್ನು ಮದುವೆಯಾದ ಕಾರಣ ಆಕೆಯ ಪೋಷಕರು ಮಗಳು ಬದುಕಿದ್ದಾಗಲೇ ತಮ್ಮ ಪಾಲಿಗೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಮಗಳ ಫೋಟೊಗೆ ಹಾಲು, ತುಪ್ಪು ಹಾಕಿ ಪೂಜೆ ಮಾಡಿ ತಿಥಿ ಮಾಡಿದ ಹಾಗೆ ತಮ್ಮ ಶೈಲಿಯಲ್ಲಿ ವಿಧಿವಿಧಾನ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಂದಿಗೂ ಸಹ ದಲಿತರೆಂದರೆ ಸವರ್ಣೀಯರು ಕೀಳುಮಟ್ಟದಲ್ಲಿ ಕಾಣುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
18 ವರ್ಷದ ಯುವತಿ ಕೋಮಲ್ ಪ್ರಜಾಪತ್ ತಮ್ಮದೇ ಪಟ್ಟಣದ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇದರಿಂದ ಕೋಪಗೊಂಡ ಕುಟುಂಬದವರು ತಮ್ಮ ಪಾಲಿಗೆ ಮಗಳು ಸತ್ತಿದ್ದಾಳೆ ಎಂದು ಘೋಷಿಸಿ ಈ ನಿರ್ಧಾರ ತೆಗೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ನಡೆಗೆ ಭಾರೀ ಟೀಕೆ ವ್ಯಕ್ತವಾಗಿದೆ.
ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ತೆಗೆಯಬೇಕು ಎಂದು ‘ರಿಸರ್ವೇಷನ್ ಹಠಾವೋ ಆಂದೋಲನ’ವನ್ನು ನಡೆಸಲಾಗಿತ್ತು. ಸದ್ಯ ಈ ಘಟನೆಯಡಿಯಲ್ಲಿ ಆ ಆಂದೋಲನವನ್ನು ಉಲ್ಲೇಖಿಸಿ ಮೀಸಲಾತಿ ವಿರುದ್ಧ ದನಿ ಎತ್ತಿದವರು ಈಗ ಮುಂದೆ ಬಂದು ಇದರ ವಿರುದ್ಧ ದನಿ ಎತ್ತಿ, ನಾವೆಲ್ಲ ಒಂದೇ ಎಂದು ಬೊಬ್ಬೆ ಹೊಡೆಯುತ್ತಿದ್ದವರು ಈಗ ಸಮಾನತೆಯ ಪಾಠ ಮಾಡಿ ಎಂದು ಕಿಡಿಕಾರಿದ್ದಾರೆ.
ಸಂವಿಧಾನವಿದ್ದು, ದಲಿತರಿಗೆ ಕಾನೂನುಗಳಿದ್ದೇ ಹೀಗೆ, ಇನ್ನೇನಾದರೂ ನೀವು ಕೇಳಿದ ಹಾಗೆ ಜಾತಿ ಆಧಾರಿತ ಮೀಸಲಾತಿಯನ್ನು ತೆಗೆದುಹಾಕಿದರೆ ದಲಿತರ ಪಾಡು ಇನ್ಯಾವ ಮಟ್ಟಕ್ಕೆ ಹಾಳಾಗಬೇಡ ಎಂದು ಪ್ರಶ್ನಿಸಿದ್ದಾರೆ.

