ಬಲೂಚ್ ಬಂಡುಕೋರರ ದಾಳಿಯಿಂದ ಪಾಕಿಸ್ತಾನ ಸೇನೆ ಕಂಗೆಟ್ಟಿದ್ದು, ಪ್ರತಿಯಾಗಿ ಬಲೂಚಿಸ್ತಾನದಲ್ಲಿ ಅಟ್ಟಹಾಸ ಆರಂಭಿಸಿದೆ. ಆಸಿಮ್ ಮುನೀರ್ ಅವರ ಸೈನ್ಯದ ಪ್ರತಿದಾಳಿಯಲ್ಲಿ ಸುಮಾರು 150 ಮಂದಿ ಸಾವನ್ನಪ್ಪಿದ್ದಾರೆ.
ಭಾನುವಾರ ಬಲೂಚಿಸ್ತಾನದಲ್ಲಿ ನಡೆದ ಸರಣಿ ದಾಳಿಗಳ ಹಿಂದೆ ಬಂಡುಕೋರರ ಮೇಲೆ ಮಾತ್ರವಲ್ಲದೆ, ಸಾಮಾನ್ಯ ನಾಗರಿಕರ ಮೇಲೆಯೂ ಪಾಕಿಸ್ತಾನದ ಭದ್ರತಾ ಪಡೆಗಳು ದೌರ್ಜನ್ಯ ಎಸಗಲು ಪ್ರಾರಂಭಿಸಿವೆ ಎಂದು ವರದಿಯಾಗಿದೆ. ರಾಯಿಟರ್ಸ್ ಅಧಿಕೃತ ಅಂಕಿಅಂಶಗಳನ್ನು ಉಲ್ಲೇಖಿಸಿ, ಹಿಂಸಾಚಾರದಲ್ಲಿ ಕನಿಷ್ಠ 31 ನಾಗರಿಕರು, 17 ಭದ್ರತಾ ಸಿಬ್ಬಂದಿ ಮತ್ತು 145 ಬಂಡುಕೋರರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಈ ಅಶಾಂತ ಪ್ರಾಂತ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದ್ದು, ಇಸ್ಲಾಮಾಬಾದ್ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಪ್ರತಿಜ್ಞೆ ಮಾಡಿದೆ.
ಬ್ಯಾಂಕ್, ಜೈಲುಗಳು ಮತ್ತು ಸೇನಾ ನೆಲೆಗಳ ಮೇಲೆ ಬಂಡುಕೋರರ ಗುರಿ
ಸೇನಾ ಕಾರ್ಯಾಚರಣೆಯ ಎರಡನೇ ದಿನದಂದು, ಅಧಿಕಾರಿಗಳು ಇಡೀ ಪ್ರಾಂತ್ಯದಾದ್ಯಂತ ಕಟ್ಟುನಿಟ್ಟಿನ ಭದ್ರತಾ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಎಎಫ್ಪಿ ಸುದ್ದಿ ಸಂಸ್ಥೆಯ ಪ್ರಕಾರ, ಶನಿವಾರದ ದಾಳಿಯಲ್ಲಿ ರಾಜಧಾನಿ ಕ್ವೆಟ್ಟಾ ಸೇರಿದಂತೆ ಸುಮಾರು ಹನ್ನೆರಡು ಸ್ಥಳಗಳನ್ನು ಭಾನುವಾರವೂ ಸೀಲ್ ಮಾಡಲಾಗಿದೆ. ಬ್ಯಾಂಕ್ಗಳು, ಜೈಲುಗಳು ಮತ್ತು ಸೇನಾ ಸಂಸ್ಥೆಗಳ ಮೇಲೆ ಬಂಡುಕೋರರು ದಾಳಿ ಮಾಡಿದ ನಂತರ ಸೇನೆಯು ಪೀಡಿತ ಪ್ರದೇಶಗಳಲ್ಲಿ ತಲಾಶ್ ನಡೆಸುತ್ತಿದೆ. ಈ ಹಿಂಸಾಚಾರದ ನಡುವೆ ಉಪ ಜಿಲ್ಲಾಧಿಕಾರಿಯೊಬ್ಬರನ್ನು ಅಪಹರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಟರ್ನೆಟ್ ಸ್ಥಗಿತ, ರಸ್ತೆಗಳು ಖಾಲಿ
ಬಲೂಚಿಸ್ತಾನದಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು 24 ಗಂಟೆಗಳಿಗೂ ಹೆಚ್ಚು ಕಾಲ ಸ್ಥಗಿತಗೊಳಿಸಲಾಗಿದೆ. ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಭದ್ರತಾ ದೃಷ್ಟಿಯಿಂದ ರೈಲು ಸೇವೆಗಳನ್ನು ಕೂಡ ನಿಲ್ಲಿಸಲಾಗಿದೆ. ಸಾಮಾನ್ಯವಾಗಿ ಜನಜಂಗುಳಿಯಿಂದ ಇರುತ್ತಿದ್ದ ಕ್ವೆಟ್ಟಾ ನಗರ ಭಾನುವಾರ ಸಂಪೂರ್ಣ ಸ್ತಬ್ಧವಾಗಿತ್ತು. ಪ್ರಮುಖ ರಸ್ತೆಗಳು ಖಾಲಿಯಾಗಿದ್ದವು, ಅಂಗಡಿಗಳನ್ನು ಮುಚ್ಚಲಾಗಿತ್ತು ಮತ್ತು ಮತ್ತೆ ಹಿಂಸಾಚಾರ ಸಂಭವಿಸಬಹುದು ಎಂಬ ಭಯದಿಂದ ಜನರು ಮನೆಗಳಲ್ಲೇ ಉಳಿದಿದ್ದರು. ಸ್ಫೋಟ ಮತ್ತು ಗುಂಡಿನ ದಾಳಿಯ ತೀವ್ರತೆಗೆ ಸಾಕ್ಷಿಯಾಗಿ ರಸ್ತೆಗಳಲ್ಲಿ ವಾಹನಗಳ ಅವಶೇಷಗಳು ಬಿದ್ದಿದ್ದವು.
ಈ ಪ್ರದೇಶದ ಅತ್ಯಂತ ಸಕ್ರಿಯ ಪ್ರತ್ಯೇಕತಾವಾದಿ ಗುಂಪು ‘ಬಲೂಚ್ ಲಿಬರೇಶನ್ ಆರ್ಮಿ’ (BLA) ದಾಳಿಯ ಹೊಣೆ ಹೊತ್ತುಕೊಂಡಿದೆ. ಬಂದೂಕು ದಾಳಿ ಮತ್ತು ಆತ್ಮಹತ್ಯಾ ಬಾಂಬ್ ಸ್ಫೋಟಗಳ ಮೂಲಕ ಸೇನಾ ನೆಲೆಗಳು, ಪೊಲೀಸ್ ಮತ್ತು ನಾಗರಿಕ ಆಡಳಿತದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಅದು ತಿಳಿಸಿದೆ. ಬಲೂಚಿಸ್ತಾನವು ದಶಕಗಳಿಂದ ಪ್ರತ್ಯೇಕತಾವಾದಿ ಬಂಡಾಯವನ್ನು ಎದುರಿಸುತ್ತಿದ್ದು, ಇಲ್ಲಿ ಭದ್ರತಾ ಪಡೆಗಳು ಮತ್ತು ವಿದೇಶಿ ಹಿತಾಸಕ್ತಿಗಳ ಮೇಲೆ ಪದೇ ಪದೇ ದಾಳಿಗಳು ನಡೆಯುತ್ತಲೇ ಇವೆ.
ಪಾಕಿಸ್ತಾನಕ್ಕೆ ಭಾರತದ ಚಾಟಿ
ಬಲೂಚಿಸ್ತಾನದ ಹಿಂಸಾಚಾರದಲ್ಲಿ ಭಾರತದ ಹಸ್ತಕ್ಷೇಪವಿದೆ ಎಂಬ ಪಾಕಿಸ್ತಾನಿ ಸೇನೆಯ ಆರೋಪವನ್ನು ಭಾರತ ತೀವ್ರವಾಗಿ ತಿರಸ್ಕರಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, “ಪಾಕಿಸ್ತಾನದ ಇಂತಹ ಆಧಾರರಹಿತ ಆರೋಪಗಳನ್ನು ನಾವು ತಿರಸ್ಕರಿಸುತ್ತೇವೆ. ಇದು ತನ್ನ ಆಂತರಿಕ ವೈಫಲ್ಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಅವರ ಹಳೆಯ ತಂತ್ರವಾಗಿದೆ” ಎಂದು ಹೇಳಿದ್ದಾರೆ. “ಬೆದರಿಕೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಇತಿಹಾಸವನ್ನು ಹೊಂದಿರುವ ಪಾಕಿಸ್ತಾನವು, ತನ್ನ ಜನರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವತ್ತ ಗಮನಹರಿಸಬೇಕು” ಎಂದು ಭಾರತ ಕಿವಿಮಾತು ಹೇಳಿದೆ.

