ಕೆಲವರಿಗೆ ಮಾತಿಗೂ ಮೊದಲು ಸಿಟ್ಟೇ ಬರುತ್ತದೆ. “ಅವನಿಗೆ ಮೂಗಿನ ತುದಿಯಲ್ಲೇ ಕೋಪ” ಎಂದು ನಾವು ತಮಾಷೆ ಮಾಡುತ್ತೇವೆ ನಿಜ. ಆದರೆ, ಈ ಅತಿಯಾದ ಸಿಟ್ಟು ಎನ್ನುವುದು ಕೇವಲ ಸ್ವಭಾವವಲ್ಲ, ಅದೊಂದು ಮಾನಸಿಕ ಸಮಸ್ಯೆಯೂ ಆಗಿರಬಹುದು ಎಂಬುದು ನಿಮಗೆ ಗೊತ್ತೇ?
ಏನಿದು ಸ್ಫೋಟಕ ಸಿಟ್ಟು?
ವೈದ್ಯಕೀಯ ಲೋಕದಲ್ಲಿ ಇದನ್ನು ಇಂಟರ್ ಮಿಟೆಂಟ್ ಎಕ್ಸ್‌ಪ್ಲೋಸಿವ್ ಡಿಸಾರ್ಡರ್’ (IED) ಎಂದು ಕರೆಯಲಾಗುತ್ತದೆ. ಇಂತವರು ಸದಾ ಕಾಲ ಸಿಟ್ಟಾಗಿರುವುದಿಲ್ಲ. ಆದರೆ, ಒಮ್ಮೆ ಸಿಟ್ಟು ಬಂದರೆ ಜಗತ್ತನ್ನೇ ಮರೆತುಬಿಡುತ್ತಾರೆ. ಸ್ಫೋಟಕದಂತೆ ಸಿಡಿಯುವ ಇವರು, ಆ ಸಮಯದಲ್ಲಿ ಏನು ಮಾಡುತ್ತಿದ್ದೇವೆಂಬ ಪ್ರಜ್ಞೆಯನ್ನೂ ಕಳೆದುಕೊಳ್ಳಬಹುದು. ಇದು ಅವರ ಸಂಬಂಧಗಳನ್ನು ಹಾಳು ಮಾಡುವುದಲ್ಲದೆ, ಎದುರಿಗಿರುವವರಲ್ಲಿ ಭಯ ಹುಟ್ಟಿಸುತ್ತದೆ.
ಕೋಪದಿಂದ ದೇಹಕ್ಕಾಗುವ ನಷ್ಟಗಳೇನು?
ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬರುವುದಿಲ್ಲ ಎಂಬ ಗಾದೆ ಮಾತಿನಂತೆ, ಸಿಟ್ಟಿನಲ್ಲಿ ಆಡುವ ಮಾತು ಮತ್ತು ಮಾಡುವ ಕೃತ್ಯಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಅತಿಯಾದ ಸಿಟ್ಟಿನಿಂದ ದೈಹಿಕವಾಗಿಯೂ ತೊಂದರೆಗಳಿವೆ,ಕೋಪ ಹೆಚ್ಚಾದಾಗ ರಕ್ತದೊತ್ತಡವು ಹೆಚ್ಚಾಗುತ್ತದೆ ಮತ್ತು ಅಂತಿಮವಾಗಿ ಅಧಿಕ ರಕ್ತದೊತ್ತಡವಾಗುತ್ತದೆ, ಇದು ಪಾರ್ಶ್ವವಾಯು ಅಥವಾ ಹೃದಯ ಹಾನಿಗೆ ಕಾರಣವಾಗಬಹುದು. ಪದೇ ಪದೇ ಕೆಮ್ಮುವುದು ಹೃದ್ರೋಗa ಅಧಿಕ ರಕ್ತದೊತ್ತಡ ಸೆರೆಬ್ರಲ್ ಹೆಮರೇಜ್ ಅಥವಾ ಸ್ಟ್ರೋಕ್ ಮತ್ತು ಹೃದಯಾಘಾತದಂತಹ ಗಂಭೀರ ತೊಡಕುಗಳಿಗೆ ಕಾರಣವಾಗಬಹುದು.
ಕೋಪ ಎನ್ನುವುದು ಬೆಂಕಿಯಂತೆ, ಅದನ್ನು ಸರಿಯಾದ ಸಮಯಕ್ಕೆ ಆರಿಸದಿದ್ದರೆ ನಮ್ಮ ನೆಮ್ಮದಿಯನ್ನೇ ಸುಟ್ಟುಬಿಡುತ್ತದೆ. ಹಾಗಾದರೆ,
ಸಿಟ್ಟು ಬಂದಾಗ ತಕ್ಷಣ ಅದನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ? ಇಲ್ಲಿವೆ ಸರಳ ಮತ್ತು ಪರಿಣಾಮಕಾರಿ ಉಪಾಯಗಳು:
1.ಉಸಿರಾಟದ ಮೇಲೆ ಗಮನವಿರಲಿ
ಸಿಟ್ಟು ಬಂದಾಗ ನಮಗೆ ಗೊತ್ತಿಲ್ಲದಂತೆ ಉಸಿರಾಟ ವೇಗವಾಗುತ್ತದೆ. ಆಗ ದೀರ್ಘವಾಗಿ ಉಸಿರನ್ನು ಒಳಕ್ಕೆ ಎಳೆದು, ನಿಧಾನವಾಗಿ ಬಾಯಿಯ ಮೂಲಕ ಬಿಡಿ. ಹೀಗೆ ಮಾಡುವುದರಿಂದ ಮೆದುಳಿಗೆ ಆಮ್ಲಜನಕ ಸರಿಯಾಗಿ ಪೂರೈಕೆಯಾಗಿ ಮನಸ್ಸು ತಣ್ಣಗಾಗುತ್ತದೆ.
2.ತಣ್ಣೀರು ಕುಡಿಯಿರಿ
ಕೋಪ ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆಗ ತಕ್ಷಣ ಒಂದು ಲೋಟ ತಣ್ಣೀರು ಕುಡಿಯಿರಿ. ಇದು ನಿಮ್ಮ ದೇಹ ಮತ್ತು ಮೆದುಳು ಎರಡನ್ನೂ ತಂಪು ಮಾಡುತ್ತದೆ.
3.ಮೌನವೇ ಮದ್ದು
ಕೋಪದಲ್ಲಿ ಆಡುವ ಮಾತುಗಳು ಆಮೇಲೆ ಪಶ್ಚಾತ್ತಾಪಕ್ಕೆ ದಾರಿ ಮಾಡಿಕೊಡುತ್ತವೆ. ಹಾಗಾಗಿ, ಸಿಟ್ಟು ಬಂದಾಗ ಏನನ್ನೂ ಮಾತನಾಡದೆ ಮೌನವಾಗಿರಿ. ಮೌನಕ್ಕೆ ಸಿಟ್ಟನ್ನು ಸೋಲಿಸುವ ಶಕ್ತಿಯಿದೆ.
4.ಸ್ಥಳ ಬದಲಾಯಿಸಿ
ಯಾರ ಮೇಲಾದರೂ ಸಿಟ್ಟು ಬಂದಾಗ ಅವರ ಎದುರೇ ಇರಬೇಡಿ. ಆ ಜಾಗದಿಂದ ಎದ್ದು ಹೊರಗೆ ಹೋಗಿ ಅಥವಾ ಸ್ವಲ್ಪ ದೂರ ನಡೆದು ಬನ್ನಿ. ಜಾಗ ಬದಲಾದರೆ ಆಲೋಚನೆಗಳೂ ಬದಲಾಗುತ್ತವೆ.
5.ಸಂಖ್ಯೆ ಎಣಿಸಿ
ಕೋಪದ ತುತ್ತತುದಿಯಲ್ಲಿದ್ದಾಗ ಪ್ರತಿಕ್ರಿಯಿಸುವ ಮೊದಲು 1 ರಿಂದ 10 ರವರೆಗೆ ನಿಧಾನವಾಗಿ ಎಣಿಸಿ. ಈ ಹತ್ತು ಸೆಕೆಂಡುಗಳ ಗ್ಯಾಪ್ ನಿಮ್ಮನ್ನು ದೊಡ್ಡ ಎಡವಟ್ಟು ಮಾಡುವುದರಿಂದ ಕಾಪಾಡುತ್ತದೆ.
6.ಮೊಬೈಲ್ ಅಥವಾ ಸಂಗೀತದ ಮೊರೆ ಹೋಗಿ
ಮನಸ್ಸನ್ನು ಬೇರೆಡೆ ಸೆಳೆಯಲು ತಮಾಷೆಯ ವಿಡಿಯೋಗಳನ್ನು ನೋಡಿ ಅಥವಾ ನಿಮ್ಮ ನೆಚ್ಚಿನ ಹಾಡುಗಳನ್ನು ಕೇಳಿ. ಸಂಗೀತಕ್ಕೆ ಮನಸ್ಥಿತಿಯನ್ನು (Mood) ಬದಲಿಸುವ ಅದ್ಭುತ ಶಕ್ತಿಯಿದೆ.
7.ನಿಯಮಿತ ವ್ಯಾಯಾಮ ಮತ್ತು ಯೋಗ
ದೈಹಿಕ ಚಟುವಟಿಕೆಗಳು ಮನಸ್ಸಿನ ಹತಾಶೆಯನ್ನು ಹೊರಹಾಕಲು ಸಹಾಯ ಮಾಡುತ್ತವೆ. ದಿನವೂ ಯೋಗ ಅಥವಾ ಧ್ಯಾನ ಮಾಡುವುದರಿಂದ ಒಟ್ಟಾರೆ ಒತ್ತಡ ಕಡಿಮೆಯಾಗಿ, ಶಾಂತ ಸ್ವಭಾವ ನಿಮ್ಮದಾಗುತ್ತದೆ.
8.ನೆಚ್ಚಿನ ಕೆಲಸದಲ್ಲಿ ತೊಡಗಿಸಿಕೊಳ್ಳಿ
ಕೋಪ ಬಂದಾಗ ನಿಮಗೆ ಇಷ್ಟವಾದ ನೃತ್ಯ, ಚಿತ್ರಕಲೆ ಅಥವಾ ಅಡುಗೆಯಂತಹ ಕೆಲಸಗಳಲ್ಲಿ ಮಗ್ನರಾಗಿ. ಇದು ನಿಮ್ಮ ಸಿಟ್ಟನ್ನು ಕ್ರಿಯಾತ್ಮಕವಾಗಿ ಬದಲಿಸುತ್ತದೆ.
9.ಒತ್ತಡ ಕಡಿಮೆ ಮಾಡಿಕೊಳ್ಳಿ (Stress Free)
ಅತಿಯಾದ ಕೆಲಸದ ಒತ್ತಡವೂ ಸಣ್ಣ ವಿಷಯಕ್ಕೆ ಸಿಟ್ಟು ಬರಲು ಕಾರಣವಾಗಬಹುದು. ಆಗಾಗ ಗ್ರೀನ್ ಟೀ ಸೇವಿಸುವುದು ಅಥವಾ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವುದು ಒತ್ತಡವನ್ನು ಕಡಿಮೆ ಮಾಡುತ್ತದೆ.
10.ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ
ಯಾರ ಮೇಲಾದರೂ ರೇಗುವ ಮೊದಲು, ಅವರು ಆ ಪರಿಸ್ಥಿತಿಯಲ್ಲಿ ಯಾಕೆ ಹಾಗೆ ಮಾಡಿದರು ಎಂದು ಯೋಚಿಸಿ. ವಾಸ್ತವ ತಿಳಿಯದೆ ಕೋಪ ಮಾಡಿಕೊಳ್ಳುವುದು ಮೂರ್ಖತನ ಎನಿಸಿಕೊಳ್ಳಬಹುದು.

