ಚಿಕ್ಕಮಗಳೂರು: ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಹಾ ಪ್ರಬಂಧ ಮಂಡಿಸಿ ಪಿ.ಎಚ್.ಡಿ. ಪದವಿ ಪಡೆದುಕೊಂಡಿದ್ದಾರೆ.
ಮೈಸೂರಿನಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರಿಂದ ಸಿ.ಟಿ. ರವಿ ಪಿ.ಎಚ್.ಡಿ. ಪದವಿ ಸ್ವೀಕರಿಸಿದ್ದಾರೆ. ಮುಕ್ತ ಗಂಗೋತ್ರಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಕೆ.ಜೆ. ಸುರೇಶ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳು’ ಒಂದು ಅಧ್ಯಯನ ವಿಷಯ ಕುರಿತ ಮಹಾಪ್ರಬಂಧಕ್ಕೆ ಸಿ.ಟಿ. ರವಿ ಅವರಿಗೆ ಪಿ.ಎಚ್.ಡಿ. ಪದವಿ ನೀಡಲಾಗಿದೆ.
ಈ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಸಿ.ಟಿ. ರವಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತಗಂಗೋತ್ರಿ ಮೈಸೂರಿನಲ್ಲಿ ನಡೆದ 21ನೇ ಘಟಕೋತ್ಸವದಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಸುರೇಶ್ ಅವರ ಮಾರ್ಗದರ್ಶನದಲ್ಲಿ ನಾನು ಮಂಡಿಸಿದ “ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳ ಒಂದು ಅಧ್ಯಯನ” ಪ್ರಬಂಧಕ್ಕೆ ರಾಜ್ಯಪಾಲರ ಕೈಯಿಂದ ಡಾಕ್ಟರೇಟ್ ಪದವಿ ಸ್ವೀಕರಿಸಿದೆ ಎಂದು ತಿಳಿಸಿದ್ದಾರೆ.
ನಿರಂತರವಾದ 4 ವರುಷಗಳ ಅಧ್ಯಯನದೊಂದಿಗೆ 2023 ರಲ್ಲಿ ಪೂರ್ಣಗೊಳಿಸಿ ಪ್ರಬಂಧ ಮಂಡಿಸಿದ್ದೇನೆ. ಅಧ್ಯಯನ ಸಂದರ್ಭದಲ್ಲಿ ತಿದ್ದಿ ತೀಡಿ ಅತ್ಯುತ್ತಮವಾಗಿ ಮಾರ್ಗದರ್ಶನ ಮಾಡಿದ ಡಾ. ಸುರೇಶ್ ಅವರಿಗೆ ಮನಪೂರ್ವಕ ಕೃತಜ್ಞತೆಗಳು. ಈ ಸಂದರ್ಭದಲ್ಲಿ ಸಹಕರಿಸಿದ ನನ್ನ ಎಲ್ಲಾ ಮಾರ್ಗದರ್ಶಕರಿಗೂ ಮಿತ್ರರಿಗೂ ಹೃತ್ಪೂರ್ವಕ ವಂದನೆಗಳು. ನಿಮ್ಮ ಪ್ರೀತಿ ಬೆಂಬಲಕ್ಕೆ ನಾನೆಂದಿಗೂ ಚಿರಋಣಿ ಎಂದು ತಿಳಿಸಿದ್ದಾರೆ.

