ಚಿಕ್ಕಮಗಳೂರು: ಆನ್ ಲೈನ್ ಟ್ರೇಡಿಂಗ್ ಹೆಸರಲ್ಲಿ ಫೇಸ್ ಬುಕ್ ನಲ್ಲಿ ಹಾಕಿದ್ದ ಜಾಹೀರಾತು ಕಂಡು ಮೋಸ ಹೋದ ವ್ಯಕ್ತಿ ಬರೋಬ್ಬರಿ 1.28 ಕೋಟಿ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶಿವಪುರ ಗ್ರಾಮದ ನಿವಾಸಿ ಕಲ್ಲೇಗೌಡ ಎಂಬುವರಿಗೆ ಆನ್ ಲೈನ್ ವಂಚಕರು, ಆನ್ಲೈನ್ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ಹೆಸರಲ್ಲಿ ಕೋಟ್ಯಂತರ ರೂ ಹಣ ವಂಚಿಸಿದ್ದಾರೆ. ‘FYERS’ ಎಂಬ ಟ್ರೇಡಿಂಗ್ ಜಾಹೀರಾತನ್ನು ಫೇಸ್ಬುಕ್ನಲ್ಲಿ ನೋಡಿದ ಕಲ್ಲೇಗೌಡರು F8-FYERS ಸೆಕ್ಯೂರಿಟೀಸ್ ವಾಟ್ಸಾಪ್ ಗ್ರೂಪ್ ಸೇರಿದ್ದಾರೆ.
ಆನ್ಲೈನ್ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ಹೆಸರಲ್ಲಿ ಕಲ್ಲೇಗೌಡಗೆ ವಂಚಕರು ಹೆಚ್ಚಿನ ಲಾಭ ಗಳಿಸುವ ಆಸೆ ತೋರಿಸಿದ್ದಾರೆ. ಹಂತ ಹಂತವಾಗಿ 1 ಕೋಟಿ 28 ಲಕ್ಷದ 10 ಸಾವಿರ ರೂ. ಪಡೆದುಕೊಂಡಿದ್ದಾರೆ. ಆದರೆ ಯಾವುದೇ ರೀತಿಯ ಲಾಭಾಂಶ ನೀಡಿಲ್ಲ. ಹೀಗಾಗಿ ಕಲ್ಲೇಗೌಡರು ಹಣ ವಿತ್ಡ್ರಾ ಮಾಡಲು ಹೋದಾಗ ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಕಲ್ಲೇಗೌಡ ಚಿಕ್ಕಮಗಳೂರು ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಇಂತಹ ಫೇಸ್ಬುಕ್ ಜಾಹೀರಾತು ನಂಬುವ ಮುನ್ನ ಎಚ್ಚರಿಕೆ ವಹಿಸುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚಕರು, ಸೈಬರ್ ವಂಚಕರ ಜಾಲ ದಿನಂದಿಂದ ದಿನಕ್ಕೆ ಹೆಚ್ಚುತ್ತಿದ್ದು, ಯಾವುದೇ ಮಾಹಿತಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಮುನ್ನ ಜಾಗೃತೆ ವಹಿಸುವುದು ಅಗತ್ಯ.

