ಬೆಂಗಳೂರು: ಬೆಂಗಳೂರಿನ ‘ನಮ್ಮ ಮೆಟ್ರೋ’ ನಿಲ್ದಾಣಕ್ಕೆ ಖಾಸಗಿ ಕಂಪನಿಯ ಹೆಸರಿಡಲು ಬಿಎಂಆರ್ಸಿ ಎಲ್ ಬರೋಬ್ಬರಿ 40 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಆದಾಯ ಗಳಿಕೆಯತ್ತ ಹೊಸ ಹೆಜ್ಜೆ ಇಟ್ಟಿದೆ.
ಬಯೋಕಾನ್ ಹೆಬ್ಬಗೋಡಿ, ಡೆಲ್ಟಾ ಎಲೆಕ್ಟ್ರಾನಿಕ್ ಸಿಟಿ, ಪ್ರೆಸ್ಟಿಜ್ ಗ್ರೂಪ್ ಬೆಳ್ಳಂದೂರು (90 ಕೋಟಿ) ಬಳಿಕ ಇದೀಗ ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣಕ್ಕೆ ಮತ್ತೊಂದು ನಿಲ್ದಾಣಕ್ಕೆ ಖಾಸಗಿ ಕಂಪನಿ ಹೆಸರಿಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಔಟರ್ ರಿಂಗ್ ರೋಡ್ ನ ಪ್ರಮುಖ ಮೆಟ್ರೋ ನಿಲ್ದಾಣವೊಂದಕ್ಕೆ ‘ಬಾಗ್ ಮಾನೆ’ ಹೆಸರಿಡಲು ಬೆಂಗಳೂರು ಮೆಟ್ರೋ ರೈಲು ನಿಗಮವು-ಬಿಎಂಆರ್ ಸಿ ಎಲ್ ಬರೋಬ್ಬರಿ 40 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದೆ.
ಔಟರ್ ರಿಂಗ್ ರೋಡ್ ನ ‘ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ಸ್ಟೇಷನ್’ಗೆ ಭಾಗ್ ಮನೆ ಹೆಸರಿಡಲು 40 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದು, ಬಾಗ್ ಮಾನೆ ಡೆವಲಪರ್ಸ್ ಪ್ರೈವೆಟ್ ಲಿಮಿಟೆಡ್ ಜೊತೆಗೆ ಬಿಎಂಆರ್‌ಸಿಎಲ್ 20 ವರ್ಷಗಳ ಅವಧಿಗೆ ಈ ಒಪ್ಪಂದ ಮಾಡಿಕೊಂಡಿದೆ. ಈ ಹೆಸರಿಡುವ ಹಕ್ಕಿಗಾಗಿ ಕಂಪನಿಯು ಒಟ್ಟು 40 ಕೋಟಿ ರೂಪಾಯಿಗಳನ್ನು ಪಾವತಿಸಲಿದ್ದು, ವಿಶೇಷವೆಂದರೆ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಕಂಪನಿಯು ಈಗಾಗಲೇ 20 ಕೋಟಿ ರೂಪಾಯಿಗಳನ್ನು ಬಿಎಂಆರ್‌ಸಿಎಲ್‌ಗೆ ಮುಂಗಡವಾಗಿ ಪಾವತಿಸಿದೆ.
ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಂ ಮಾರ್ಗದಲ್ಲಿ ಔಟರ್ ರಿಂಗ್ ರೋಡ್ ಬರುವ ‘ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ಸ್ಟೇಷನ್’ ಇನ್ನು ಮುಂದೆ ಬಾಗ್ ಮಾನೆ ಹೆಸರನ್ನು ಇಡಲಾಗುತ್ತದೆ. ಇದು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 19.75 ಕಿಮೀ ಉದ್ದದ ಪ್ರಮುಖ ಮಾರ್ಗದಲ್ಲಿ ಬರುತ್ತದೆ. ಈ ಮಹತ್ವದ ಒಪ್ಪಂದಕ್ಕೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ. ರವಿಶಂಕರ್ ಹಾಗೂ ಬಾಗ್ಮನೆ ಡೆವಲಪರ್ಸ್ ಪರವಾಗಿ ಆದಿತ್ಯ ಬಾಗ್ ಮಾನೆ ಅವರು ಸಹಿ ಹಾಕಿದರು.
ಇನ್ನು ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರದವರೆಗಿನ ಈ ಮೆಟ್ರೋ ಮಾರ್ಗವು ವೇಗವಾಗಿ ಸಿದ್ಧಗೊಳ್ಳುತ್ತಿದ್ದು, ಈ ವರ್ಷದ ಡಿಸೆಂಬರ್ ವೇಳೆಗೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ. ಇದೇ ಮಾರ್ಗದಲ್ಲಿ ಇನ್ನೂ ಎರಡು ನಿಲ್ದಾಣಗಳಿಗೆ ಖಾಸಗಿ ಕಂಪನಿಗಳ ಹೆಸರಿಡುವ ಕುರಿತು ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಆ ಒಪ್ಪಂದಗಳೂ ಅಂತಿಮಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

