ಬೆಂಗಳೂರು: ಆನ್ಲೈನ್ ಗೇಮಿಂಗ್ ಚಟಕ್ಕೆ ಒಳಗಾಗಿದ್ದ ಎನ್ನಲಾದ 20 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ನಡೆದ ಮೂರು ದಿನಗಳ ಬಳಿಕ ಶವ ಪತ್ತೆಯಾದ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತನನ್ನು ಉದಯ್ (20) ಎಂದು ಗುರುತಿಸಲಾಗಿದೆ. ಈತ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ಯಾರಾ ಮೆಡಿಕಲ್ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ವ್ಯಾಸಂಗಕ್ಕಾಗಿ ಈತನಿಗೆ ಮನೆ ಮೇಲುಗಡೆ ಪ್ರತ್ಯೇಕ ಕೊಠಡಿ ನಿರ್ಮಿಸಿ ಕೊಟ್ಟಿದ್ದರು. ಮನೆಯ ಮೇಲ್ಭಾಗದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕುಟುಂಬದವರು ಕೊಠಡಿಗೆ ಹೋಗದ ಕಾರಣ ಘಟನೆ ತಕ್ಷಣ ಬೆಳಕಿಗೆ ಬಂದಿರಲಿಲ್ಲ. ಮೂರು ದಿನಗಳ ಬಳಿಕ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಕೊಠಡಿಯ ಬಾಗಿಲು ತೆರೆಯುತ್ತಿದ್ದಂತೆ ಉದಯ್ ಮೃತದೇಹ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಉದಯ್ ಆನ್ಲೈನ್ ಗೇಮಿಂಗ್ಗೆ ಅತಿಯಾಗಿ ಆಸಕ್ತನಾಗಿದ್ದು, ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೊಬೈಲ್ ಹಾಗೂ ಇತರ ಡಿಜಿಟಲ್ ಸಾಧನಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.
ಪೋಷಕರೇ ಮಕ್ಕಳನ್ನು ಆನ್ಲೈನ್ ಗೇಮಿಂಗ್ ಚಟದಿಂದ ರಕ್ಷಿಸಲು ಈ ಸಲಹೆಗಳನ್ನು ಪಾಲಿಸಿ
• ಮೊಬೈಲ್ ಬಳಕೆಗೆ ಸಮಯ ಮಿತಿ ನಿಗದಿಪಡಿಸಿ.
• ಮಕ್ಕಳು ಯಾವ ಗೇಮ್ ಆಡುತ್ತಿದ್ದಾರೆ ಎಂಬುದನ್ನು ನಿಯಮಿತವಾಗಿ ಗಮನಿಸಿ.
• ಹಣ ಪಾವತಿಸುವ (In-App Purchase) ಸೌಲಭ್ಯಗಳಿಗೆ ನಿರ್ಬಂಧ ಹಾಕಿ.
• ಮಕ್ಕಳೊಂದಿಗೆ ಪ್ರತಿದಿನ ಮುಕ್ತವಾಗಿ ಮಾತನಾಡಿ, ಅವರ ಮಾನಸಿಕ ಸ್ಥಿತಿಯನ್ನು ಅರಿಯಿರಿ.
• ಹೊರಾಂಗಣ ಆಟ, ಕ್ರೀಡೆ ಹಾಗೂ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿ.
• ರಾತ್ರಿ ವೇಳೆ ಮೊಬೈಲ್ ಅಥವಾ ಲ್ಯಾಪ್ಟಾಪ್ ಅನ್ನು ಮಕ್ಕಳ ಕೊಠಡಿಯಲ್ಲಿ ಇಡದಂತೆ ನೋಡಿಕೊಳ್ಳಿ.
• ನಿದ್ರಾಹೀನತೆ, ಕೋಪ, ಏಕಾಂತ, ಓದಿನ ಮೇಲಿನ ಆಸಕ್ತಿ ಕಡಿಮೆಯಾಗುವುದು ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.
• ಗೇಮಿಂಗ್ ಚಟ ನಿಯಂತ್ರಣ ತಪ್ಪಿದರೆ ಮನೋವೈದ್ಯರು ಅಥವಾ ಕೌನ್ಸೆಲರ್ಗಳ ಸಲಹೆ ಪಡೆಯಿರಿ.
• ಮಕ್ಕಳೊಂದಿಗೆ ವಿಶ್ವಾಸದ ಸಂಬಂಧ ಬೆಳೆಸಿ; ತಪ್ಪು ಮಾಡಿದರೂ ಭಯವಿಲ್ಲದೆ ಮಾತನಾಡುವ ವಾತಾವರಣ ನಿರ್ಮಿಸಿ.
• ಗೇಮಿಂಗ್ಗಿಂತ ಕುಟುಂಬದೊಂದಿಗೆ ಸಮಯ ಕಳೆಯಲು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಉತ್ತೇಜಿಸಿ.

